Home ಟಾಪ್ ಸುದ್ದಿಗಳು ಶ್ಲೋಕಗಳಲ್ಲಿ ದನದ ಮಾಂಸ ಆರೋಗ್ಯಕ್ಕೆ ಒಳ್ಳೆಯದು ಎಂದಿದೆ; ಆದರೆ ನಾನು ತಿಂದಿಲ್ಲ : ಸಿದ್ದರಾಮಯ್ಯ

ಶ್ಲೋಕಗಳಲ್ಲಿ ದನದ ಮಾಂಸ ಆರೋಗ್ಯಕ್ಕೆ ಒಳ್ಳೆಯದು ಎಂದಿದೆ; ಆದರೆ ನಾನು ತಿಂದಿಲ್ಲ : ಸಿದ್ದರಾಮಯ್ಯ

ಮೈಸೂರು : “ದನದ ಮಾಂಸ ಸೇವಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ಶ್ಲೋಕಗಳಲ್ಲೇ ಹೇಳಿದೆ. ಆದರೆ, ನಾನು ದನದ ಮಾಂಸ ತಿಂದಿಲ್ಲ” ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

“ದನದ ಮಾಂಸ ತಿನ್ನುವ ಬಗ್ಗೆ ಶ್ಲೋಕವಿದೆ. ಆದರೆ, ಆ ಶ್ಲೋಕ ನನಗೆ ನೆನಪಾಗುತ್ತಿಲ್ಲ. ಆ ಮೇಲೆ ನೆನಪು ಮಾಡಿಕೊಂಡು ತಿಳಿಸುತ್ತೇನೆ. ಸಂಸ್ಕೃತ ತಿಳಿದಿರುವವರೇ ಶ್ಲೋಕ ಬರೆದಿರುತ್ತಾರೆ. ಹಾಗಾದರೆ, ಶ್ಲೋಕದಲ್ಲಿ ತಪ್ಪು ಇದೆಯಾ?” ಎಂದು ಅವರು ಪ್ರಶ್ನಿಸಿದ್ದಾರೆ.

“ಒಳ್ಳೆಯ ದನದ ಮಾಂಸ ತಿಂದರೆ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಎಂದು ಶ್ಲೋಕದಲ್ಲಿದೆ. ಆದರೆ, ಈಗ ನನಗೆ ಆ ಶ್ಲೋಕ ನೆನಪಾಗುತ್ತಿಲ್ಲ. ಮತ್ತೊಮ್ಮೆ ಮೈಸೂರಿಗೆ ಬಂದಾಗ ನಾನು ಆ ಶ್ಲೋಕ ಹೇಳುತ್ತೇನೆ. ಈಗ ಶ್ಲೋಕವನ್ನು ತಿಳಿಸಿದರೆ ವಿವಾದವುಂಟು ಮಾಡುತ್ತಾರೆ. ಹಾಗಾಗಿ ಶ್ಲೋಕವನ್ನು ಸರಿಯಾಗಿ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.

“ಈವರೆಗೆ ನಾನು ಗೋ ಮಾಂಸ ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿನ್ನುತ್ತೇನೆ. ಆದರೆ, ಅದನ್ನು ಕೇಳಲು ಇವರು ಯಾರು? ಆಹಾರ ನನ್ನ ಹಕ್ಕು, ಅದನ್ನು ಪ್ರಶ್ನೆ ಮಾಡೋಕೆ ಇವರ್ಯಾರು?” ಎಂದು ಅವರು ಪ್ರಶ್ನಿಸಿದ್ದಾರೆ.

“ನಾನು ಕೋಳಿ, ಕುರಿ ಹಾಗೂ ಆಡಿನ ಮಾಂಸ ಮಾತ್ರ ತಿಂದಿದ್ದೇನೆ. ಆದರೆ ನಮ್ಮ ಆಹಾರ ಪದ್ಧತಿಯನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ” ಎಂದು ಅವರು ಹೇಳಿದ್ದಾರೆ.

ವಿಶ್ವದಲ್ಲಿ ಮಾಂಸಾಹಾರಿಗಳ ಸಂಖ್ಯೆ ಹೆಚ್ಚಿದೆ. ಚೀನಾದಲ್ಲಿ ನಾಲ್ಕು ಕಾಲಿನ ಮಂಚವೊಂದನ್ನು ಬಿಟ್ಟು ಬೇರೆಲ್ಲವನ್ನೂ ತಿನ್ನುತ್ತಾರೆ. ಇದು ನಿಮಗೆ ತಿಳಿದಿದೆಯಾ?. ಇಂಗ್ಲೆಂಡ್, ಅಮೆರಿಕ, ಬ್ರಿಟನ್ ಸೇರಿದಂತೆ ಬೇರೆ ದೇಶದಲ್ಲಿರುವವರು ದನದ ಮಾಂಸ ತಿನ್ನುತ್ತಾರೆ. ಹಾಗಾದರೆ ಅವರೆಲ್ಲಾ ಪ್ರಾಣಿಗಳಾ? ಬೇರೆಯವರಿಗೆ ಏನು ಇಷ್ಟ ಇದೆಯೋ ಅದನ್ನು ತಿನ್ನಲು ಬಿಡಿ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version