Home ಟಾಪ್ ಸುದ್ದಿಗಳು “ಸರಕಾರದ ದುಡ್ಡು ಅಂದ್ರೆ ಸಿಟಿ ರವಿ, ಯಡಿಯೂರಪ್ಪನವರ ಮನೆ ದುಡ್ಡು ಅಲ್ಲ” : ಸಿಟಿ ರವಿಗೆ...

“ಸರಕಾರದ ದುಡ್ಡು ಅಂದ್ರೆ ಸಿಟಿ ರವಿ, ಯಡಿಯೂರಪ್ಪನವರ ಮನೆ ದುಡ್ಡು ಅಲ್ಲ” : ಸಿಟಿ ರವಿಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಶಾಸಕರ ನಿಧಿ ಅಂದ್ರೆ ಅದು ಸಿಟಿ ರವಿ, ಯಡಿಯೂರಪ್ಪನವರ ಮನೆ ದುಡ್ಡು ಅಲ್ಲ, ಅದು ಜನರಿಗೆ ಸೇರಿದ ತೆರಿಗೆ ದುಡ್ಡು ಅಂತಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕ ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. “ಸರಕಾರದ ಹಣದಿಂದ ಕಾಂಗ್ರೆಸ್ ಪ್ರಚಾರ ಪಡೆಯುತ್ತಿದೆ” ಅನ್ನೋ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಸರಕಾರದ ದುಡ್ಡು ಅಂದ್ರೆ ಯಾವುದ್ರೀ..? ಶಾಸಕರಿಗೆ ಕೊಡೋದು ಯಾರದ್ರೀ ದುಡ್ಡು? ಮನೆ, ರಸ್ತೆ ನಿರ್ಮಿಸೋದು ಯಾರ್ ದುಡ್ಡು? ಅದೇನು ಜನರ ದುಡ್ಡು ಅಲ್ವಾ?” ಎಂದು ಪ್ರಶ್ನಿಸಿದ್ದಾರೆ. “ಎಂಎಲ್ಎ ಫಂಡ್ ಅಂದ್ರೆ ಸಾರ್ವಜನಿಕರ ತೆರಿಗೆ ದುಡ್ಡು, ಅದನ್ನ ಬಳಸಿಕೊಂಡು ಬಹಳ ವಿವೇಚನೆಯಿಂದ ಖರ್ಚು ಮಾಡ್ಬೇಕು. ಇಂತಹ ಸಂಕಷ್ಟ ಕಾಲದಲ್ಲಿ ಶಾಸಕರ ನಿಧಿ ಹಾಗೂ ಪಕ್ಷದ ನಿಧಿಯಿಂದ ಸಂಗ್ರಹಿಸಿದ ಒಟ್ಟು 100 ಕೋಟಿ ರೂ. ಗಳಲ್ಲಿ ವ್ಯಾಕ್ಸಿನ್ ಖರೀದಿಸಿ ಅಗತ್ಯ ಉಳ್ಳವರಿಗೆ ಕೊಡುವ ಕೆಲಸ ಮಾಡುತ್ತಿದ್ದೇವೆ. ಇದು ಯಾರ ದುಡ್ಡೂ ಅಲ್ಲ, ನಮ್ದೂ ಅಲ್ಲ, ಅವರದ್ದೂ ಅಲ್ಲ ಜನರ ತೆರಿಗೆ ಹಣ” ಎಂದರು.

“ಎರಡನೇ ಅಲೆ ಬರುತ್ತೆ ಅಂತಾ ನವೆಂಬರ್ 30ಕ್ಕೆ ಹೇಳಿದ್ರೂ, ಯಾಕಾಗಿ ಸರಕಾರ ಸಿದ್ಧತೆ ಮಾಡಿಕೊಂಡಿರಲಿಲ್ಲ. ಸಾವಿರಾರು ಜನ ಆಕ್ಸಿಜನ್ ಇಲ್ದೇ ಸತ್ರಲ್ಲ, ಅದಕ್ಕೆಲ್ಲ ಯಾರು ಜವಾಬ್ದಾರರು? ಸಿಟಿ ರವಿ ಇದಕ್ಲೆಲ್ಲ ಉತ್ತರಿಸುತ್ತಾರ” ಎಂದು ಪ್ರಶ್ನಿಸಿದರು.

ಇನ್ನು ಬಿಜೆಪಿ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನನಗೆ ಎಲ್ಲಾ ಕ್ಷೇತ್ರಗಳ ಬಗ್ಗೆಯೂ ಪ್ರೀತಿ ಇದೆ. ಕೊರೊನಾ ಸಮಯದಲ್ಲಿ ರಾಜಕೀಯ ಮಾಡಲು ಇಷ್ಟಪಡುವುದಿಲ್ಲ. ಕಾಂಗ್ರೆಸ್ ಯಾವತ್ತೂ ಬಡಜನರ ಪರವಾಗಿ ಇರುತ್ತೆ. ಬಿಜೆಪಿಯವರು ಎಲ್ಲ ವಿಚಾರದಲ್ಲೂ ರಾಜಕೀಯ ಮಾಡುವವರು” ಎಂದು ಹೇಳಿದರು.

Join Whatsapp
Exit mobile version