Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಕೃತ್ಯಕ್ಕೆ ತೀವ್ರ ಖಂಡನೆ; ಜಿಲ್ಲೆಯ ವಿವಿಧೆಡೆ ಕೈಪಡೆ ಪ್ರತಿಭಟನೆ

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಕೃತ್ಯಕ್ಕೆ ತೀವ್ರ ಖಂಡನೆ; ಜಿಲ್ಲೆಯ ವಿವಿಧೆಡೆ ಕೈಪಡೆ ಪ್ರತಿಭಟನೆ

ಹಾಸನ: ಮಡಿಕೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ ಖಂಡಿಸಿ ಕಾಂಗ್ರೆಸ್ ಮತ್ತು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಸಿದರು.


ಬೇಲೂರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾಜಿ ಸಚಿವ ಬಿ.ಶಿವರಾಂ ನೇತೃತ್ವದಲ್ಲಿ ಪ್ರತಿಭಟನೆ ನಡೆದಿ ನೂರಾರು ಮಂದಿ ಬಿಜೆಪಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ಗೃಹ ಇಲಾಖೆ ವೈಫಲ್ಯದಿಂದಲೇ ವಿಪಕ್ಷ ನಾಯಕರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿದೆ. ಅನೇಕ ಕಡೆಗಳಲ್ಲಿ ಅವರ ಕಾರನ್ನ ಸುತ್ತುವರೆದು ಪ್ರತಿಭಟನೆ ಮಾಡಲಾಗುತ್ತಿದೆ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಸರ್ಕಾರ ಹೀಗಾ ಬಂದೋಬಸ್ತ್ ನೀಡೋದು ಎಂದು ಪ್ರಶ್ನಿಸಿದರು. ಸರ್ಕಾರದ ವೈಫಲ್ಯದಿಂದಲೇ ಇಂಥ ಘಟನೆ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಇದೇ ರೀತಿ ಸಕಲೇಶಪುರದಲ್ಲೂ ನಿನ್ನೆ ರಾತ್ರಿ ಸಿದ್ದರಾಮಯ್ಯ ಅಗಮನದ ವೇಳೆ ಘೋಷಣೆ ಕೂಗಿದ ಕ್ರಮ ಖಂಡಿಸಿ ಪಟ್ಟಣದ ಪೊಲೀಸ್ ಠಾಣೆ ಎದುರು ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಜಿಲ್ಲಾದ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡ ಹೆಚ್.ಕೆ.ಮಹೇಶ್ ಮೊದಲಾದವರು ಭಾಗವಹಿಸಿ, ತಪ್ಪಿತಸ್ಥರ ಮೇಲೆ ಕೇಸು ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.



ಮತ್ತೊಂದು ಕಡೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ದಾಳಿ ಖಂಡಿಸಿ ಮೊಟ್ಟೆ ತಿಂದು ವಿನೂತನ ಪ್ರತಿಭಟನೆ ನಡೆಸಿದರು. ಹೇಮಾವತಿ ಪ್ರತಿಮೆ ಬಳಿ ಮೊಟ್ಟೆ ಇಟ್ಟುಕೊಂಡು ಧರಣಿ ನಡೆಸಿದ ಯೂತ್ ಕಾರ್ಯಕರ್ತರು, ಪ್ರಮುಖ ನಾಯಕರಿಗೆ ಸೂಕ್ತ ರಕ್ಷಣೆ ನೀಡದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆ ಮುಗಿದ ನಂತರ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಗೊರೂರು ಇತರರು, ಮೊಟ್ಟೆ ಹಂಚಿದರು.

Join Whatsapp
Exit mobile version