ಮಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 107 ನೇ ಜನ್ಮದಿನಾಚರಣೆ ಸಂದರ್ಭದಲ್ಲಿ 2022-23ನೇ ಸಾಲಿನ ಡಿ.ದೇವರಾಜ ಅರಸು ಜಿಲ್ಲಾ ಮಟ್ಟದ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಜಯಾನಂದ ದೇವಾಡಿಗ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಮುಲ್ಕಿಯ ಜಯಾನಂದ ದೇವಾಡಿಗರು ಡಿ. ದೇವರಾಜ ಅರಸು ಅವರ ಚಿಂತನೆ, ಆದರ್ಶ ತತ್ವಗಳಿಗೆ ಧ್ವನಿಯಾಗಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ, ನಿರಂತರವಾಗಿ ಹೋರಾಟ ಮಾಡಿದ್ದಾರೆ.
ಅವರು ದೇವರಾಜ ಅರಸುರವರು ಕಾರ್ಯಗತಗೊಳಿಸಿದ ಯೋಜನೆ, ಕಾರ್ಯಕ್ರಮಗಳನ್ನು ಹಿಂದುಳಿದ ವರ್ಗಗಳ ಸಮುದಾಯಕ್ಕೆ ತಲುಪಿಸಲು ನಿರಂತರವಾಗಿ ಶ್ರಮಿಸಿದವರು, ಹಿಂದುಳಿದ ವರ್ಗಗಳ ಶಿಕ್ಷಣ, ಆರ್ಥಿಕ ಅಭಿವೃದ್ಧಿಗಾಗಿ, ಹಿಂದುಳಿದ ವರ್ಗಗಳ ಜನಾಂಗದವರನ್ನು ಮುಖ್ಯವಾಹಿನಿಗೆ ಕರೆ ತರಲು ಶ್ರಮಿಸಿದ್ದಾರೆ. ಇದೇ ಆಗಸ್ಟ್, 2022ರ ಆ.20ರ ಮಧ್ಯಾಹ್ನ 2.30ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್ ಅವರು ಮುಲ್ಕಿ ಜಯಾನಂದ ದೇವಾಡಿಗ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 50,000 ರೂ.ಗಳ ನಗದನ್ನು ಒಳಗೊಂಡಿರುತ್ತದೆ.
ಜಿಲ್ಲಾ ಮಟ್ಟದಲ್ಲಿ, ಡಿ.ದೇವರಾಜ ಅರಸು ಪ್ರಶಸ್ತಿ ನೀಡಲು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಆಯ್ಕೆ ಮಾಡಿರುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.