Home ಟಾಪ್ ಸುದ್ದಿಗಳು ಸಿದ್ದರಾಮಯ್ಯಗೆ ಸಚಿವ ಅಶ್ವಥ್ ನಾರಾಯಣ ಅವರಿಂದ ಕೊಲೆ ಬೆದರಿಕೆ; ಶೋಷಿತ ಸಮುದಾಯಗಳಿಂದ ಪ್ರತಿಭಟನಾ ಸಮಾವೇಶ

ಸಿದ್ದರಾಮಯ್ಯಗೆ ಸಚಿವ ಅಶ್ವಥ್ ನಾರಾಯಣ ಅವರಿಂದ ಕೊಲೆ ಬೆದರಿಕೆ; ಶೋಷಿತ ಸಮುದಾಯಗಳಿಂದ ಪ್ರತಿಭಟನಾ ಸಮಾವೇಶ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಹಿರಂಗ ಕೊಲೆ ಬೆದರಿಕೆ ಹಾಕಿರುವ ಸಚಿವ ಆಶ್ವಥ್ ನಾರಾಯಣ ಅವರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಬೇಕು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಗ್ರಹಿಸಿದೆ.


ಬೆಂಗಳೂರು ಪ್ರೆಸ್ ಕ್ಲಬ್’ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಡಾ.ಬಿ.ಟಿ.ಲಲಿತಾ ನಾಯಕ್, ಪದೇ ಪದೇ ಹೀನಾಯ ಮಾತುಗಳ ಮೂಲಕ ಸಿದ್ದರಾಮಯ್ಯ ಅವರನ್ನು ಅವಮಾನಿಸುತ್ತಿರುವ ಶಾಸಕ ಸಿ.ಟಿ.ರವಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಇದುವರೆಗೂ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವ ಮಂಡ್ಯ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.


ರಾಜ್ಯ ಸರ್ಕಾರ ಆಶ್ವಥ್ ನಾರಾಯಣ ಅವರನ್ನು ವಾರದೊಳಗೆ ಬಂಧಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಶೋಷಿತ ಸಮುದಾಯಗಳ ಪರವಾಗಿ ಯಾವಾಗಲೂ ಧ್ವನಿ ಎತ್ತುವ ನಾಯಕರೆಂದರೆ ಸಿದ್ದರಾಮಯ್ಯನವರು ಮಾತ್ರ. ಈ ಹಿನ್ನೆಲೆಯಲ್ಲಿ ಎಲ್ಲ ಶೋಷಿತ ಸಮುದಾಯಗಳು ಒಟ್ಟಾಗಿ ಈ ವೇದಿಕೆಯನ್ನು ಸೃಷ್ಟಿಸಿದ್ದೇವೆ ಎಂದು ಅವರು ತಿಳಿಸಿದರು.
ಸಂಚಲನಾ ಸಮಿತಿ ಅಧ್ಯಕ್ಷ ಪ್ರೊ. ಲಕ್ಷ್ಮೀ ನರಸಿಂಹಯ್ಯ ಮಾತನಾಡಿ, ಈ ಸರ್ಕಾರದಲ್ಲಿ ಯಾವ ಮಂತ್ರಿಗೂ ಯಾವುದೇ ರೀತಿಯ ವೈಚಾರಿಕತೆ ಇಲ್ಲವಾಗಿದೆ. ಆಶ್ವಥ್ ನಾರಾಯಣ ಅವರನ್ನು ಕ್ಯಾಬಿನೆಟ್ ನಿಂದ ವಜಾಗೊಳಿಸಬೇಕು. ಅವರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹೇಳಿದರು.


ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಸಿದ್ದರಾಮಯ್ಯ ಎಲ್ಲ ಶೋಷಿತ ಸಮುದಾಯಗಳ ನಾಯಕರು. ಅವರಂತಹ ನಾಯಕ ರಾಜ್ಯದಲ್ಲಿ ಕಾಣಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರಿಗೆ ರಕ್ಷಣೆ ನೀಡಬೇಕು. ಅವರ ಜೀವಕ್ಕೆ ಹಾನಿಯಾದರೆ ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಸಂಚಾಲಕರಾದ ಎಣ್ಣೆಗೆರೆ ವೆಂಕಟರಾಮಯ್ಯ, ಎನ್. ಅನಂತ ನಾಯ್ಕ, ಜಿ.ಡಿ.ಗೋಪಾಲ್, ಸುರೇಶ್ ಎಂ.ಲಾತೋರ್, ಮಹಾತೇಶ್ ಕವಲಗಿ ಮತ್ತಿತರರು ಹಾಜರಿದ್ದರು.

Join Whatsapp
Exit mobile version