ಕಾಶ್ಮೀರ: ಸೇನೆಯ ಕಸ್ಟಡಿಯಲ್ಲಿದ್ದಾಗಲೇ ನಾಪತ್ತೆಯಾಗಿದ್ದ ಎನ್ನಲಾದ ಯುವಕನ ಮೃತದೇಹ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕಾಡಿನೊಳಗೆ ಮಾರ್ಚ್ 1ರಂದು ಪತ್ತೆಯಾಯಿದ್ದು, ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದಾರೆ.
ಕುನಾನ್ ಗ್ರಾಮ ನಿವಾಸಿ ಅಬ್ದುಲ್ ರಶೀದ್ ದಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸೇನಾ ವಶದಲ್ಲಿದ್ದ ಆತನು ಕಾಣೆಯಾಗಿರುವ ಬಗ್ಗೆ ಮನೆಯವರು ಮತ್ತು ನೆರೆಹೊರೆಯವರು ನ್ಯಾಯ ಕೇಳಿ ಪ್ರತಿಭಟನೆ ನಡೆಸಿದ್ದರು. ಅಂತಿಮವಾಗಿ ಬುಧವಾರ ಕುಪ್ವಾರದ ಜಿರ್ಹಾಮಾದಲ್ಲಿ ಬಹುತೇಕ ಕೊಳೆತ ಸ್ಥಿತಿಯಲ್ಲಿ ಆತನ ದೇಹ ಪತ್ತೆಯಾಗಿದೆ.
ಸೇನೆಯವರು ಆತನನ್ನು ಕೊಂದಿದ್ದಾರೆ ಎಂದು ಅಬ್ದುಲ್ ಅವರ ಅಣ್ಣ ಶಬೀರ್ ಅಹ್ಮದ್ ಆರೋಪ ಮಾಡಿದ್ದಾರೆ. “ನನ್ನ ತಮ್ಮ ಕಾನೂನಿಗೆ ಗೌರವ ನೀಡುವ ವ್ಯಕ್ತಿ. ಆತನನ್ನು ಅವರು ಏಕೆ ಕೊಂದರು ಎಂದು ನನಗೆ ಗೊತ್ತು. ಆತನ ತಪ್ಪೇನು? ನನಗೆ ನ್ಯಾಯ ಬೇಕು” ಎಂದು ಕಣ್ಣೀರಿಡುತ್ತಾ ಶಬೀರ್ ಒತ್ತಾಯಿಸಿದ್ದಾರೆ.
ಕುಪ್ವಾರದ ಜಿರ್ಹಾಮಾ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆದಿದ್ದಾಗ ಶವ ಸಿಕ್ಕಿದೆ ಎಂದು ಕುಪ್ವಾರದ ಹಿರಿಯ ಪೊಲೀಸ್ ಸೂಪರಿನ್ ಟೆಂಡೆಂಟ್ ಯೌಗಲ್ ಮನ್ಹಾಸ್ ಹೇಳಿದರು.
“ದೇಹವು ಕೊಳೆತಿತ್ತು. ಕುಟುಂಬದವರು ಅದನ್ನು ಸರಿಯಾಗಿ ಗುರುತಿಸಲು ಕುಪ್ವಾರಕ್ಕೆ ತರಬೇಕು ಎಂದು ಒತ್ತಾಯಿಸಿದರು. ದೇಹವನ್ನು ಒಂದು ಮೇಲ್ಮಟ್ಟದ ಹೊಂಡದಲ್ಲಿ ಹೂಳಲಾಗಿತ್ತು. ಮೇಲೆ ಮುಚ್ಚಿದ್ದ ಅಲ್ಪ ಸ್ವಲ್ಪ ಮಣ್ಣು ಮಂಜು ಮಳೆಗೆ ಕೊಚ್ಚಿ ಹೋಗಿದೆ” ಎಂದೂ ಅವರು ಹೇಳಿದರು.
ಗುರುತು ಹಿಡಿಯಲು ಕುಟುಂಬದವರನ್ನು ಕರೆಯಲಾಗಿತ್ತು ಎಂದು ಕುನಾನ್ ಗ್ರಾಮದ ಸರಪಂಚ್ ಖುರ್ಷಿದ್ ಅಹ್ಮದ್ ತಿಳಿಸಿದರು. “ದೇಹವು ತೀರಾ ಕೊಳೆತಿತ್ತು. ಕುಪ್ವಾರಕ್ಕೆ ತಂದು, ಜಿಲ್ಲಾ ಆಸ್ಪತ್ರೆಯಲ್ಲಿ ಕುಟುಂಬದವರಿಂದ ಶವದ ಗುರುತು ಖಚಿತ ಪಡಿಸಲಾಯಿತು” ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರ ಪಡೆಯಲ್ಲಿ ವಿಶೇಷ ಪೊಲೀಸ್ ಆಗಿ ಶಬೀರ್ ಕೆಲಸ ಮಾಡುತ್ತಿದ್ದಾರೆ. ಸೇನೆಯವರು ತಪ್ಪಿಸಿಕೊಂಡಿದ್ದಾನೆ ಎಂದು ಹೇಳಿದ ಮರ್ಹಾಮಾದಿಂದ ಶವ ಸಿಕ್ಕಿರುವ ಪ್ರದೇಶ ಒಂದು ಕಿಲೋಮೀಟರ್ ಮಾತ್ರ ದೂರದಲ್ಲಿದೆ. “ಓಡಿ ಕಾಣೆಯಾಗಿದ್ದಾನೆ ಎನ್ನುವುದು ಸೇನೆಯವರು ತಮ್ಮ ಕೊಲೆ ಮುಚ್ಚಿ ಹಾಕಲು ಕಟ್ಟಿರುವ ಕತೆ” ಎನ್ನುತ್ತಾರೆ ಶಬೀರ್.
ಓಡಿ ಹೋದ ಎಂದು ಹೇಳಲಾದ ದಿನ ನಾವೆಲ್ಲ ಹುಡುಕಲು ಹೋದಾಗ ಸೇನೆಯವರು ನಮ್ಮನ್ನು ಮರ್ಹಾಮಾದಿಂದ ದಾರಿ ತಪ್ಪಿಸಿದ್ದರು. ಅಲ್ಲೇ ಇದ್ದ ಹೊಂಡ ಶೋಧ ತಂಡಗಳಿಗೆ ಏಕೆ ಸಿಗಲಿಲ್ಲ ಎಂದೂ ಅವರು ಪ್ರಶ್ನಿಸುತ್ತಾರೆ.
ಸೇನೆ ಯಾವುದೇ ಸಂಚು ಒಪ್ಪಿಕೊಳ್ಳುತ್ತಿಲ್ಲ. ವಿಚಾರಣೆ ವೇಳೆ ರಶೀದ್ ತನಗೆ ಮರ್ಹಾಮಾ ಪ್ರದೇಶದಲ್ಲಿ ಉಗ್ರರು ಗೊತ್ತೆಂದು ಹೇಳಿದನೆಂದೂ, ಅಲ್ಲಿಗೆ ಕರೆದೊಯ್ದಾಗ ಓಡಿ ಹೋದ ಎನ್ನುತ್ತಾರೆ ಸೇನಾ ತುಕಡಿಯವರು.
ತಮ್ಮ ನಾಪತ್ತೆಯಾದಂದಿನಿಂದ ಶಬೀರ್ ಸರಕಾರಿ ಕಚೇರಿ ಮತ್ತು ಭದ್ರತಾ ಸಂಸ್ಥೆಗಳಿಂದ ಈ ಬಗ್ಗೆ ಸಾಕ್ಷ್ಯಾಧಾರಗಳನ್ನು ಹುಡುಕುತ್ತಲೇ ಇದ್ದಾರೆ. ಶವದ ಮೇಲೆ ಬೆಂಕಿಯಿಂದ ಸುಟ್ಟಂತಹ ಕೆಂಪು ಗುರುತುಗಳು ಕಂಡಿವೆ ಮತ್ತು ಮುಖ ಗುರುತಿಸಲಾಗದಂತೆ ಮಾಡಲಾಗಿದೆ. ನಾಪತ್ತೆಯಾಗುವ ದಿನ ಆತ ಧರಿಸಿದ್ದ ಬಟ್ಟೆ ನಾಪತ್ತೆಯಾಗಿದೆ. ಹೂಳುವಾಗ ಒಳಚಡ್ಡಿಯನ್ನು ಮಾತ್ರ ಆತುರದಿಂದ ಹಾಕಿದಂತಿದೆ ಎನ್ನುತ್ತಾರೆ ಶಬೀರ್.
2022ರ ಡಿಸೆಂಬರ್ 15ರ ರಾತ್ರಿ ಎಂಟೂವರೆ ಗಂಟೆ ಹೊತ್ತಿಗೆ 41ನೇ ರಾಷ್ಟ್ರೀಯ ರೈಫಲ್ಸ್ ಸೇನಾ ತುಕಡಿಯವರು ಪೊಲೀಸರಿಗೆ ಮಾಹಿತಿ ನೀಡದೆ ರಶೀದ್’ನನ್ನು ಮನೆಯಿಂದ ವಿಚಾರಣೆಗೆಂದು ಕರೆದುಕೊಂಡು ಹೋಗಿದ್ದಾರೆ.
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕುನಾನ್ ಒಂದು ಗ್ರಾಮ; ಇನ್ನೊಂದು ಪೋಶ್ಪೋರ. ಊರಲ್ಲಿ ಇರುವ 23- 40 ಮಹಿಳೆಯರಲ್ಲಿ 1991ರ ಫೆಬ್ರವರಿ 23ರಂದು ಗರ್ಭಿಣಿ ಮಹಿಳೆಯೊಬ್ಬರ ಮೇಲೆ ಸೈನಿಕರು ಅತ್ಯಾಚಾರ ನಡೆಸಿದ್ದರು. ಇದು ಕಾಶ್ಮೀರದ ಸೇನಾ ದುರಾಚಾರದಲ್ಲಿ ದೊಡ್ಡ ಕಪ್ಪು ಚುಕ್ಕೆಯಾಗಿದೆ.
ರಶೀದ್ ಅವರ ವೃದ್ಧ ತಾಯಿ, ಕಾಯಿಲೆ ಬಿದ್ದ ತಂದೆ ಅಬ್ದುಲ್ ಫಾರಿಕ್ ದಾರ್, ಇಬ್ಬರು ಸಹೋದರಿಯರು, ಅಣ್ಣ ಶಬೀರ್ ಮತ್ತು ಹಲವು ಸಂಬಂಧಿಕರು ಶ್ರೀನಗರದ ಮಾಧ್ಯಮ ಆವರಣದ ಬಳಿ ನಾಪತ್ತೆ ಪ್ರಶ್ನಿಸಿ ಡಿಸೆಂಬರ್ 21ರಂದು ಧರಣಿ ಕುಳಿತರು.
ಭದ್ರತಾ ದಳ, ಸೇನೆಯ ಕಸ್ಟಡಿಯಲ್ಲಿ ಕಳೆದ ಮೂರು ದಶಕದಲ್ಲಿ ನೂರಾರು ಮಂದಿ ನಾಗರಿಕರು ನಾಪತ್ತೆಯಾಗಿದ್ದಾರೆ. ಕೆಲವರ ಶವಗಳು ಮಾತ್ರ ದೊರೆತಿವೆ; ಹಲವರದು ಸಿಕ್ಕಿಲ್ಲ. 1989ರಿಂದ ಕಾಶ್ಮೀರದಲ್ಲಿ 8,000 ಮಂದಿ ಕಾಣೆಯಾಗಿದ್ದಾರೆ ಎಂದು ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ. ಪ್ರತೀ ತಿಂಗಳ 10ನೇ ತಾರೀಕಿನಂದು ಹೀಗೆ ಕಾಣೆಯಾದವರ ಕುಟುಂಬದವರು ಶ್ರೀನಗರದ ಮಾಧ್ಯಮ ಕಾಲೊನಿಯಲ್ಲಿ ಪ್ರತಿಭಟನೆ ನಡೆಸುತ್ತಾರೆ. 2019ರಂದು ಕೇಂದ್ರ ಸರಕಾರವು ವೀಶೇಷಾಧಿಕಾರದ 370ನೇ ವಿಧಿಯನ್ನು ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶ ಮಾಡಿದ ಬಳಿಕ ಅದಕ್ಕೆ ಅವಕಾಶವಿಲ್ಲದಂತೆ ಮಾಡಲಾಗಿದೆ.
ರಶೀದ್ ಸಾವು ಮತ್ತು ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗುತ್ತಲೇ ಕುನಾನ್ ಊರಿನ ನಾಗರಿಕರು ಕೂಡಿ ಬಂದು ಜಮ್ಮು ಕಾಶ್ಮೀರದ ಆಡಳಿತದ ವಿರುದ್ಧ ಮತ್ತು ಸೇನೆಯ ವಿರುದ್ಧ ಘೋಷಣೆ ಕೂಗಿದರು. ಕೊಲೆಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅವರು ಘೋಷಣೆ ಕೂಗಿದರು.
ಬುಧವಾರ ರಾತ್ರಿ 8 ಗಂಟೆಗೆ ಅವರ ಹಿರಿಯರ ಸಮಾಧಿಗಳಿರುವ ಸ್ಮಶಾನದಲ್ಲಿ ರಶೀದ್ ಅವರ ಅಂತ್ಯಕ್ರಿಯೆ ನಡೆಯುವಾಗ ಸಾವಿರಾರು ಜನ ಸೇರಿದ್ದರು. ದಪನದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಶಬೀರ್ ಅವರು, ನಾನು ಭದ್ರತಾ ಆಡಳಿತ, ಸರಕಾರಿ ಅಧಿಕಾರಿಗಳನ್ನು ಬಿಡದೆ ಭೇಟಿ ಮಾಡಿ ಈ ಸಾವಿನ ತನಿಖೆ ಹಳ್ಳಹಿಡಿಯದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
“ಕಳೆದ 30 ವರ್ಷಗಳಲ್ಲಿ ಕುಪ್ವಾರ ಜಿಲ್ಲೆಯಲ್ಲಿ ಸಾವಿರಾರು ಜನ ಕಾಣೆಯಾಗಿದ್ದಾರೆ. ನನ್ನ ತಮ್ಮನ ಶವ ಸಿಕ್ಕಿದ್ದೇ ಹೆಚ್ಚು. ಶವವೇ ಸಿಗದು, ಸಿಕ್ಕರೂ ಊರಿಗೆ ತರುವುದಿಲ್ಲ. ನನಗೆ ಸದ್ಯ ತಮ್ಮನ ದಪನ ನಮ್ಮಲ್ಲೇ ಮಾಡಲು, ಆತನಿಗಾಗಿ ಪ್ರಾರ್ಥಿಸಲು ಅವಕಾಶ ಸಿಕ್ಕಿದೆ” ಎಂದು ಶಬೀರ್ ಕಾಶ್ಮೀರದ ಪರಿಸ್ಥಿತಿಯನ್ನು ಅನಾವರಣಗೊಳಿಸಿದರು.