Home ಟಾಪ್ ಸುದ್ದಿಗಳು ದಕ್ಷಿಣ ಕನ್ನಡದಲ್ಲಿ ಕೊಲೆ ರಾಜಕೀಯ: ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಕಿಡಿಕಿಡಿ

ದಕ್ಷಿಣ ಕನ್ನಡದಲ್ಲಿ ಕೊಲೆ ರಾಜಕೀಯ: ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಕಿಡಿಕಿಡಿ

►ಮಸೂದ್, ಫಾಝಿಲ್ ಕುಟುಂಬಕ್ಕೆ ಯಾಕೆ ಪರಿಹಾರ ಕೊಟ್ಟಿಲ್ಲ?

►ಮಾನ-ಮರ್ಯಾದಿ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ

►ಅಮೃತಮಹೋತ್ಸವದ ಭಾಷಣದಲ್ಲಿ ಸಿದ್ದರಾಮಯ್ಯ ಆಕ್ರೋಶ

ದಾವಣಗೆರೆ: ದಕ್ಷಿಣ ಕನ್ನಡದಲ್ಲಿ ನಡೆದ ಮೂವರು ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಾರತಮ್ಯ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದ ಭಾಷಣದ ವೇಳೆ ಮಸೂದ್, ಪ್ರವೀಣ್, ಫಾಝಿಲ್ ಕೊಲೆ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಸಬ್ಕಾ ಸಾಥ್, ಸಬ್ಕಾ ವಿಶ್ವಾಸ್ ಎಂದು ಹೇಳುವ ಬಿಜೆಪಿ ಸರ್ಕಾರ, ಕೊಲೆಯಾದವರ ಕುಟುಂಬಕ್ಕೆ ಪರಿಹಾರ ನೀಡುವಾಗ ತಾರತಮ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡದಲ್ಲಿ ಮಸೂದ್ ಕೊಲೆಯಾಗಿದೆ, ಪ್ರವೀಣ್ ಕೊಲೆಯಾಗಿದೆ ಫಾಝಿಲ್ ಕೊಲೆಯಾಗಿದೆ. ಸಿಎಂ ಅವರು ಮಸೂದ್ ಮನೆಗೆ ಹೋಗಲಿಲ್ಲ, ಫಾಝಿಲ್ ಮನೆಗೆ ಹೋಗಿಲ್ಲ. ಕೇವಲ ಪ್ರವೀಣ್ ಕುಟುಂಬಕ್ಕೆ ಮಾತ್ರ ಪರಿಹಾರ ಕೊಟ್ಟ ನೀವು ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಪರಿಹಾರ ಕೊಡಲಿಲ್ಲ. ನಿಮಗೆ ಸಬ್ಕಾ ಸಾಥ್ ಎಂದು ಹೇಳುವ ಯೋಗ್ಯತೆ ಇದೆಯಾ? ಎಂದು ಪ್ರಶ್ನಿಸಿದರು.

ನೀವು ಆಡಳಿತ ನಡೆಸಲು ಲಾಯಕ್ಕಿಲ್ಲ. ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೊಮ್ಮಾಯಿಯವರೇ, ನೀವು ಇಡೀ ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಒಂದು ಧರ್ಮಕ್ಕೆ ಸೇರಿದ ಮುಖ್ಯಮಂತ್ರಿಯೋ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ರಾಜ್ಯದ ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ, ನಿಮಗೆ ಎಷ್ಟು ಕಾಲ ದ್ವೇಷದ ರಾಜಕಾರಣ ಮಾಡಲು ಸಾಧ್ಯವಾಗುತ್ತದೆ ಎಂದು ನೋಡುತ್ತೇವೆ, ಜನಶಕ್ತಿಯ ಮುಂದೆ ದ್ವೇಷದ ಆಟ ನಡೆಯಲ್ಲ, ಒಂದು ದಿನ ಜನಶಕ್ತಿ ಎದ್ದೇ ಏಳುತ್ತದೆ ಎಂದು ಹೇಳಿದರು.

Join Whatsapp
Exit mobile version