ಕೊಲಂಬೋ: ಚೀನಾದ ಗೂಢಚಾರ ನೌಕೆಯೊಂದು ಶ್ರೀಲಂಕಾದತ್ತ ಹೊರಟಿದ್ದು ಆಗಸ್ಟ್ 11ರಂದು ಚೀನಾವೇ ಅಭಿವೃದ್ಧಿ ಪಡಿಸಿರುವ ಹಂಬನ್ತೋಟ ಬಂದರನ್ನು ತಲುಪಿ ಲಂಗರು ಹಾಕಲಿದೆ ಎಂದು ತಿಳಿದು ಬಂದಿದೆ.
ಶ್ರೀಲಂಕಾವು ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಕಾಲದಲ್ಲಿ ಈ ಗೂಢಚಾರ ಹಡಗು ಏಕೆ ಬರುತ್ತಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ.
ಭಾರತವು ರಾಜತಾಂತ್ರಿಕ ನೆಲೆಯಲ್ಲಿ ಈ ಹಡಗು ಬರುತ್ತಿರುವುದನ್ನು ಪ್ರತಿಭಟಿಸಿ ಒಂದು ಹೇಳಿಕೆ ನೀಡಿದೆ.
ಚೀನಾದ ಸಂಶೋಧನೆ ಮತ್ತು ಸರ್ವೆ ಕೆಲಸದ ಈ ಸ್ಪೈ ಹಡಗಿನ ಹೆಸರು ಯುವಾನ್ ವಾಂಗ್ 5. ಬೀಜಿಂಗ್ ತನ್ನದೇ ಹಣ ದೇಣಿಗೆ ಮತ್ತು ಸಾಲದಿಂದ ಹಂಬನ್ತೋಟ ಆಳ ಬಂದರನ್ನು ಆಧುನಿಕವಾಗಿ ನಿರ್ಮಿಸಿದೆ.
ಯುವಾನ್ ವಾಂಗ್ ಸರಣಿಯ ಹಡಗುಗಳು ಉಪಗ್ರಹಗಳನ್ನು ಗುರುತಿಸಲು, ರಾಕೆಟ್ ಹಾಗೂ ಸ್ಫೋಟ ಸಾಮರ್ಥ್ಯದ ಕ್ಷಿಪಣಿಗಳನ್ನು ಹಾರಿಸಲು ಬಳಕೆಯಾಗುತ್ತದೆ.
ಚೀನಾ ಈ ಬಗೆಯ ಏಳು ಹಡಗುಗಳನ್ನು ಹೊಂದಿದ್ದು, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾ ಸಾಗರಗಳಲ್ಲೆಲ್ಲ ಓಡಾಡುತ್ತಿದೆ. ಚೀನಾದ ಸಂಶೋಧನಾ, ಕಂಡುಹಿಡಿಯುವ ನೆಲ ನೆಲೆಗಳ ಜೊತೆ ಈ ಯುವಾನ್ ವಾಂಗ್ ಗಳು ಸಂಪರ್ಕ ಹೊಂದಿವೆ.