Home ಟಾಪ್ ಸುದ್ದಿಗಳು ರಾಜ್ಯವನ್ನು ಲೂಟಿ ಮಾಡುತ್ತಿರುವ ಬರಗೆಟ್ಟ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ ಕಿಡಿ

ರಾಜ್ಯವನ್ನು ಲೂಟಿ ಮಾಡುತ್ತಿರುವ ಬರಗೆಟ್ಟ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಕಳೆದೆರಡು ಶೈಕ್ಷಣಿಕ ವರ್ಷಗಳಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದ ಸೈಕಲ್, ಶೂ ಮತ್ತು ಸಾಕ್ಸ್ ಗಳನ್ನು ರಾಜ್ಯ ಬಿಜೆಪಿ ಸರ್ಕಾರ ನಿಲ್ಲಿಸಿದೆಯಂತೆ. ಹಿಂದಿನ ವರ್ಷಗಳಲ್ಲಿ ಕೊರೊನಾ ಕಾರಣ ನೀಡಿದ್ದ ಸರ್ಕಾರ ಈ ವರ್ಷ 40% ಕಮಿಷನ್ ನಿಂದಾಗಿ ಖಾಲಿಯಾಗಿರುವ ಖಜಾನೆ ತೋರಿಸುತ್ತಿದೆ ಎಂದು ವಿಪಕ್ಷ ನಾಯಕ ಮಾಜಿ ಸಿ ಎಂ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಒಂದೆಡೆ ರಾಜ್ಯ ಬಿಜೆಪಿ ಸರ್ಕಾರದ ಸಚಿವರು, ಆಡಳಿತ ಪಕ್ಷದ ನಾಯಕರು ಮತ್ತು ಅಧಿಕಾರಿಗಳ ದುಷ್ಟಕೂಟ ಕಮಿಷನ್ ದಂಧೆಯಲ್ಲಿ ತೊಡಗಿಕೊಂಡು ರಾಜ್ಯದ ಖಜಾನೆಯನ್ನು ಲೂಟಿ ಮಾಡುತ್ತಿದ್ದರೆ, ಇನ್ನೊಂದೆಡೆ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸೈಕಲ್, ಶೂ, ಸಾಕ್ಸ್ ನೀಡದೆ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಇಂದಿನ ದಿನದ ವರೆಗೆ ಶಾಲಾ ಮಕ್ಕಳಿಗೆ ನೀಡಬೇಕಾಗಿದ್ದ ಪಠ್ಯಪುಸ್ತಕಗಳ ಬಗ್ಗೆ ಖಚಿತ ತೀರ್ಮಾನವನ್ನು ಕೈಗೊಳ್ಳಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೆಲವು ಶಾಲೆಗಳಿಗೆ ಹಳೆಯ ಪಠ್ಯ, ಇನ್ನು ಕೆಲವು ಶಾಲೆಗಳಿಗೆ ಹೊಸ ಪಠ್ಯ, ಉಳಿದ ಶಾಲೆಗಳಿಗೆ ಪಠ್ಯವೇ ಇಲ್ಲದಂತಹ ದುಸ್ಥಿತಿ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕೊರೊನಾ ಕಾಲದ ಕಲಿಕಾ ಅಂತರವನ್ನು ಸರಿದೂಗಿಸಲು ಶಿಕ್ಷಣ ಇಲಾಖೆ “ವಿದ್ಯಾಪ್ರವೇಶ” ಮತ್ತು “ಕಲಿಕಾ ಚೇತರಿಕೆ” ಎಂಬ ಎರಡು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಇದಕ್ಕೆ ಸಂಬಂಧಿಸಿದ ಕಲಿಕಾ ಹಾಳೆಗಳನ್ನು ಕೂಡಾ ಪೂರೈಸಲು ಬಿಜೆಪಿ ಸರ್ಕಾರದಲ್ಲಿ ದುಡ್ಡಿಲ್ಲ. ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿರುವ ಕಲಿಕಾ ಹಾಳೆಗಳನ್ನು ಶಿಕ್ಷಕರು ಸ್ವಂತ ಖರ್ಚಿನಿಂದ ಡೌನ್ ಲೋಡ್ ಮಾಡಿಕೊಂಡು, ಜೆರಾಕ್ಸ್ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇಷ್ಟೊಂದು ಗತಿಗೇಡಿನ ಸರ್ಕಾರ ಹಿಂದೆ ಇರಲಿಲ್ಲ, ಇನ್ನು ಮಂದೆ ಬರಲಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲಾ ಬಡ ಮಕ್ಕಳಿಗಾಗಿ ನಮ್ಮ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಒಂದೊಂದಾಗಿ ಸ್ಥಗಿತಗೊಳಿಸಲು ಬಿಜೆಪಿ ಸರ್ಕಾರ ಹೊರಟಿದೆ. ವಿದ್ಯಾಸಿರಿ ಯೋಜನೆಗೆ ಹಣ ನೀಡುತ್ತಿಲ್ಲ, ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿ ಊಟಕ್ಕೂ ಕಲ್ಲು ಹಾಕುತ್ತಿದೆ. ಈಗ ಸೈಕಲ್, ಶೂ, ಸಾಕ್ಸ್ ಗಳನ್ನು ಕೂಡಾ ಕಿತ್ತುಕೊಳ್ಳುತ್ತಿದೆ. ವಿದ್ಯಾರ್ಥಿನಿಯರಿಗೆ ಸೈಕಲ್ ಗಳನ್ನು ನೀಡುವ ಯೋಜನೆ ಹಿಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರದ್ದು, ಆ ಯೋಜನೆಯನ್ನು ಕೂಡಾ ಸ್ಥಗಿತಗೊಳಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪನವರ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version