ಮಿತಿ ಮೀರಿದ ಬೀದಿ ನಾಯಿ ಹಾವಳಿ; ಸಾಕುಪ್ರಾಣಿಗಳು ಬಲಿ, ಸ್ಥಳೀಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ

Prasthutha|

ಅರಸೀಕೆರೆ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಇದರಿಂದ ಸಾಕು ಪ್ರಾಣಿಗಳ ಜೀವಕ್ಕೆ ಸಂಚಕಾರ ಒಂದೆಡೆಯಾದರೆ, ಮತ್ತೊಂದೆಡೆ ಮಹಿಳೆಯರು ಮಕ್ಕಳು ರಸ್ತೆಗಳಲ್ಲಿ ಓಡಾಡಲು ಭಯಪಡುವ ಸನ್ನಿವೇಶ ನಿರ್ಮಾಣವಾಗಿದೆ.

- Advertisement -

ಸಾವಿರಾರು ಸಂಖ್ಯೆಯಲ್ಲಿರುವ ಬೀದಿನಾಯಿಗಳು ನಗರ ವ್ಯಾಪ್ತಿಯ ಅಲ್ಲಲ್ಲಿ ಹಿಂಡುಹಿಂಡಾಗಿ ಕಾಣಿಸಿಕೊಳ್ಳುತ್ತಿವೆ. ಶ್ವಾನಗಳ ಅಟ್ಟಹಾಸ ಮಿತಿ ಮೀರಿದ್ದು ಕೆಲವೆಡೆ ಕರು ಕುರಿ, ಕೋಳಿ, ಹಂದಿ ಇತ್ಯಾದಿ ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿವೆ. ಹೀಗೆ ಸಾಕು ಪ್ರಾಣಿಗಳ ಮೇಲೆರಗಿ ಬಲಿ ತೆಗೆದುಕೊಳ್ಳುತ್ತಿರುವ ನಾಯಿಗಳ ಕಾಟದಿಂದ ರೋಸಿ ಹೋಗಿರುವ ಮಾಲೀಕರು ನಾಯಿಗಳ ಹಾವಳಿ ತಪ್ಪಿಸಿ ಎಂದು ನಗರಸಭೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ಸೇರಿದಂತೆ ರೈಲು ಮತ್ತು ಬಸ್ಸು ನಿಲ್ದಾಣ, ಮಾರುತಿ ನಗರ,  ಶಾನುಭೋಗರ ಬೀದಿ ಸುತ್ತಮುತ್ತ ಮುಜಾರ್ ಮೊಹಲ್ಲಾ, ಮಟನ್ ಮಾರುಕಟ್ಟೆ, ಸಿದ್ದಪ್ಪನಗರ, ಶ್ರೀನಿವಾಸ ನಗರ, ಹೀಗೆ ನಗರದ ಬಹುತೇಕ ಬಡಾವಣೆಗಳಲ್ಲಿ ನಾಯಿಗಳ ಉಪಟಳ ಹೆಚ್ಚಾಗಿದೆ.ಇದರಿಂದ ಮಹಿಳೆಯರು, ಮಕ್ಕಳು, ಶಾಲಾ ವಿದ್ಯಾರ್ಥಿಗಳು ಓಡಾಡದಂತಾಗಿದೆ. ರಸ್ತೆಗಳಲ್ಲೇ ನಾಯಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುವುದರಿಂದ ಎಷ್ಟೋ ಸಂದರ್ಭ ವಾಹನ ಸವಾರರು ಅಡ್ಡ ಬರುವ ನಾಯಿಗಳನ್ನು ತಪ್ಪಿಸಲು ಹೋಗಿ ಬಿದ್ದು ಗಾಯಗೊಂಡಿದ್ದಾರೆ.

- Advertisement -

ಕಳೆದ ಒಂದು ವರ್ಷದಿಂದ ಈಚೆಗೆ ನೂರಾರು ಸಾಕು ಪ್ರಾಣಿಗಳನ್ನು ಬಲಿ ಪಡೆದಿರುವ ಶ್ವಾನಪಡೆ, ಹತ್ತಾರು ಮಕ್ಕಳು ಹಾಗೂ ವೃದ್ಧರ ಮೇಲೆ ಏಕಾಏಕಿ ಎರಗಿ ಗಾಯಗೊಳಿಸಿವೆ. ಬೀದಿನಾಯಿಗಳ ಅಟ್ಟಹಾಸಕ್ಕೆ ಯಾವಾಗ ಕಡಿವಾಣ ಬೀಳಲಿದೆ ಎಂದು ಜನತೆ ನಗರಸಭೆ ಇತರರನ್ನು ಶಪಿಸುತ್ತಾ ದಿನ ದೂಡುವಂತಾಗಿದೆ.

ಈ ಕುರಿತು ಮಾತನಾಡಿದ ರಾಘವೇಂದ್ರ ಎಂಬವರು, ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 6 ಮೇಕೆಗಳನ್ನು ಬೀದಿ ನಾಯಿ ತಿಂದು ಹಾಕಿವೆ.ನಗರ ಸಭೆಯಿಂದಾಗಲೀ, ಸರ್ಕಾರದಿಂದಾಗಲಿ ಪರಿಹಾರ ಸಿಕ್ಕಲ್ಲ ಎಂದು ಅಳಲು ತೋಡಿಕೊಂಡರು.

ಬೀದಿ ನಾಯಿಗಳ ಉಪಟಳ ನಗರದ ಜನತೆಗಷ್ಟೇ ಅಲ್ಲ ನಗರಸಭೆಗೂ ತಲೆನೋವಾಗಿ ಪರಿಣಮಿಸಿದೆ. ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿರುವ ಬೀದಿನಾಯಿ ಸಂಖ್ಯೆಯನ್ನು ಕಡಿಮೆ ಮಾಡುವುದು ಹೇಗೆಂಬುದೇ ನಮ್ಮ ಮುಂದಿನ ಪ್ರಶ್ನೆಯಾಗಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ನಾಯಿಗಳಿಂದ ಆಗುತ್ತಿರುವ ಸಾವು-ನೋವು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ನಗರಸಭೆಯೂ ಕಾರ್ಯೋನ್ಮುಖ ಆಗಲಿದೆ ಎಂದು ನಗರಸಭೆ ಅಧ್ಯಕ್ಷ ಗಿರೀಶ್ ಹೇಳಿದ್ದಾರೆ .

Join Whatsapp
Exit mobile version