Home ಟಾಪ್ ಸುದ್ದಿಗಳು ಕೊರೋನಾ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿದೆ : ಸಿದ್ದರಾಮಯ್ಯ ಲೇವಡಿ

ಕೊರೋನಾ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿದೆ : ಸಿದ್ದರಾಮಯ್ಯ ಲೇವಡಿ

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಣೆ ಮಾಡಿರುವ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿ ರೀತಿಯಂತಿದೆ. ಜೊತೆಗೆ ಅವೈಜ್ಞಾನಿಕ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಲೇವಡಿ ಮಾಡಿದ್ದಾರೆ.

ಬಡ ಕುಟುಂಬಗಳಿಗೆ ತಲಾ ಹತ್ತು ಕೆ.ಜಿ. ಅಕ್ಕಿ ಮತ್ತು ದುಡಿಯುವ ವರ್ಗದವರಿಗೆ ತಲಾ ಹತ್ತು ಸಾವಿರ ರೂ. ಪರಿಹಾರ ನೀಡುವ ಪ್ಯಾಕೇಜ್ ಘೋಷಣೆ ಮಾಡಿ ನೂರಕ್ಕೆ ನೂರರಷ್ಟು ಲಾಕ್‍ಡೌನ್ ಜಾರಿಗೆ ತನ್ನಿ ಎಂದು ಅವರು ಒತ್ತಾಯಿಸಿದ್ದಾರೆ.

ತಮ್ಮ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ಯಾಕೇಜ್ ಘೋಷಿಸುವ ಮುನ್ನ ನೆರೆ ರಾಜ್ಯಗಳನ್ನು ನೋಡಿಯಾದರೂ ಯಡಿಯೂರಪ್ಪ ಅವರು ಪಾಠ ಕಲಿಯಬೇಕಿತ್ತು. ತುಟಿಗೆ ಸವರುವ ಪ್ಯಾಕೇಜ್ ಘೋಷಿಸುವ ಮೂಲಕ ಇತರ ರಾಜ್ಯಗಳ ಮುಂದೆ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದರು.

ಮುಖ್ಯಮಂತ್ರಿಗಳು 1250 ಕೋಟಿ ರೂ. ಪ್ಯಾಕೇಜ್ ಎಂದು ಹೇಳಿದ್ದಾರೆ. ಆದರೆ, ಅವರೇ ಬಿಡುಗಡೆ ಮಾಡಿರುವ ಅಂಕಿ-ಅಂಶ ಗಮನಿಸಿದರೆ ಪ್ಯಾಕೇï ಮೊತ್ತ 1111.82 ಕೋಟಿ ಇದೆ. ಇದರಲ್ಲಿ ಕಟ್ಟಡ ಕಾರ್ಮಿಕರಿಗಾಗಿ 494 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇದು ಸರ್ಕಾರ ತನ್ನ ಕೈಯಿಂದ ನೀಡುವುದಲ್ಲ. ಕಾರ್ಮಿಕರ ಕಲ್ಯಾಣ ನಿಧಿಯಿಂದ ನೀಡುವಂಥದ್ದು. ಅದು ಕಾರ್ಮಿಕರು ತಮ್ಮ ಕೂಲಿ ಹಣದಲ್ಲಿ ನೀಡಿರುವ ವಂತಿಗೆ. ಹೀಗಾಗಿ ಕಾರ್ಮಿಕರಿಗೆ ನೀಡಿರುವ ಪರಿಹಾರವನ್ನು ಪ್ಯಾಕೇಜ್‍ನಲ್ಲಿ ಸೇರಿಸಬಾರದು ಹೇಳಿದ್ದಾರೆ.

ಅದೇ ರೀತಿ ಸಹಕಾರ ಇಲಾಖೆಯಿಂದ ಪಿಎಲ್‍ಡಿ ಬ್ಯಾಂಕ್ ಇನ್ನಿತರೆ ಸಹಕಾರ ಬ್ಯಾಂಕ್‍ಗಳು ನೀಡಿರುವ 134.38 ಸಾಲ ವಸೂಲಾತಿ ಗಡುವನ್ನು ಮೂರು ತಿಂಗಳು ಮುಂದೂಡಲಾಗಿದೆ. ಇದನ್ನು ಸರ್ಕಾರ ಪರಿಹಾರ ಎಂಬಂತೆ ಬಿಂಬಿಸಬಾರದು. ಕಟ್ಟಡ ಕಾರ್ಮಿಕರ ಪರಿಹಾರ ಮತ್ತು ಸಾಲ ವಸೂಲಾತಿ ಮುಂದಕ್ಕೆ ಹಾಕಿರುವುದನ್ನು ಕೈ ಬಿಟ್ಟರೆ ಉಳಿಯವುದು 483.44 ಕೋಟಿ ರೂ. ಮಾತ್ರ. ಇದು ಅತ್ಯಂತ ಅವೈಜ್ಞಾನಿಕ ಮತ್ತು ಜನರಿಗೆ ಯಾವ ರೀತಿಯಲ್ಲೂ ಉಪಯೋಗ ಆಗದ ಪ್ಯಾಕೇಜ್ ಆಗಿದೆ. ಕಳೆದ ವರ್ಷ ಯಡಿಯೂರಪ್ಪ ಅವರು 2100 ಕೋಟಿ ಪ್ಯಾಕೇಜ್ ಘೋಷಿಸಿದ್ದರು. ಅದರಲ್ಲಿ 850 ಕೋಟಿ ರೂ.ಗಳಷ್ಟು ಕಟ್ಟಡ ಕಾರ್ಮಿಕರ ನಿಧಿಯಿಂದಲೇ ಹಣವನ್ನು ಖರ್ಚು ಮಾಡಿ, ಸರ್ಕಾರ ಖರ್ಚು ಮಾಡಿದೆ ಎಂದು ಸುಳ್ಳು ಹೇಳಲಾಯಿತು ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ಕಳೆದ ಬಾರಿಯ 2100 ಕೋಟಿ ರೂ.ಗಳ ಪ್ಯಾಕೇಜ್‍ನಲ್ಲಿ ಅದರಲ್ಲಿ ಬಹುಪಾಲು ಹಣವನ್ನು ಬಾದಿತರಿಗೆ ನೀಡಲೇ ಇಲ್ಲ. ಆಟೋ, ಕ್ಯಾಬ್, ಚಾಲಕರುಗಳಿಗೆ ಸಂಬಂಧಿಸಿದಂತೆ 7.75 ಲಕ್ಷ  ಜನರಿಗೆ ತಲಾ ಐದು ಸಾವಿರ ಪರಿಹಾರ ಕೊಡುವುದಾಗಿ ಹೇಳಿದ್ದರು. ಆದರೆ ವಾಸ್ತವವಾಗಿ ನೀಡಿದ್ದು, ಕೇವಲ 2.10 ಲಕ್ಷ ಜನರಿಗೆ ಮಾತ್ರ. ಹಾಗೆಯೇ ಸವಿತಾ ಸಮಾಜದ ಶೇ.50 ಜನರಿಗೂ ಪರಿಹಾರ ಸಿಗಲಿಲ್ಲ. ಅದೇ ರೀತಿ ರೈತರಿಗೆ ಹೂ ಬೆಳೆಗಾರರಿಗೆ ಹಣ್ಣು ಬೆಳಗಾರರಿಗೆ ಘೋಷಿಸಿದ್ದ ಪರಿಹಾರದ ಹಣ ಶೇ. 50 ರಷ್ಟು ಜನರಿಗೆ ಸಿಗಲಿಲ್ಲ. ಇದು ಅತ್ಯಂತ ಅವೈಜ್ಞಾನಿಕ ಪ್ಯಾಕೇಜ್. ತಮಿಳುನಾಡಿನಲ್ಲಿ 2.07,67,000 ಕುಟುಂಬಗಳಿಗೆ ತಲಾ ನಾಲ್ಕು ಸಾವಿರ ರೂ.ಗಳ ಪ್ರಕಾರ ಸುಮಾರು 8,368 ಕೋಟಿ ರೂ. ಪರಿಹಾರದ ಪ್ಯಾಕೇಜ್‍ನ್ನು  ತಮಿಳುನಾಡಿನಲ್ಲಿ ಬಿ.ಜೆ.ಪಿ.ಸರ್ಕಾರ ಇಲ್ಲ. ಕೇಂದ್ರದಲ್ಲೂ, ರಾಜ್ಯದಲ್ಲೂ ಬಿ.ಜೆ.ಪಿ ಎಂದು ಅಧಿಕಾರಕ್ಕೆ ಬಂದ ರಾಜ್ಯದ ಬಿ.ಜೆ.ಪಿ.ಸರ್ಕಾರ ಯಾವ ಕ್ಷಣದಲ್ಲೂ ಜನಪರವಾಗಿ ಯೋಚಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿಗಳು ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಹೇಳುತ್ತಿದ್ದಾರೆ.  ಆದರೆ ಬಜೆಟ್ ಮೇಲೆ ನಡೆದ ಚರ್ಚೆಗಳಿಗೆ ಉತ್ತರ ನೀಡುವಾಗ ಅವರು ನೀಡಿದ್ದ ಉತ್ತರವನ್ನು ಗಮನಿಸಬೇಕು. ಅದರಲ್ಲಿ ಅವರು ಕರ್ನಾಟಕ ರಾಜ್ಯವು ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಕೇರಳ ರಾಜ್ಯಗಳಿಗಿಂತ ಉತ್ತಮ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದ್ದೇವೆ. ಆ ರಾಜ್ಯಗಳಿಗಿಂತ ಕರ್ನಾಟಕದ ಆರ್ಥಿಕತೆ ಉತ್ತಮವಾಗಿದೆ ಎಂದು ಹೇಳಿದ್ದರು. ಆದರೆ ಇಂದು ಘೋಷಿಸಿದ ಪ್ಯಾಕೇಜ್ ನೋಡಿದರೆ ಅಕ್ಕಪಕ್ಕದ ರಾಜ್ಯಗಳ ಎದುರು ತೀರಾ ಸಣ್ಣ ಪ್ಯಾಕೇಜ್ ಆಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದಿದ್ದರೂ ಆಂಧ್ರ ಪ್ರದೇಶ, ದೆಹಲಿ, ಕೇರಳ ಮುಂತಾದ ರಾಜ್ಯಗಳು ಜನಪರವಾದ ಪ್ಯಾಕೇಜುಗಳನ್ನು ಘೋಷಿಸಿವೆ. ಆ ರಾಜ್ಯಗಳ ಮುಂದೆ ಯಡಿಯೂರಪ್ಪ ಅವರು ಘೋಷಣೆ ಮಾಡಿರುವ ಪ್ಯಾಕೇಜ್ ಏನೇನೂ ಅಲ್ಲ. ಇದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಮಡಿವಾಳರು, ಛಾಯಾಗ್ರಾಹಕರು, ಟೈಲರಿಂಗ್ ವೃತ್ತಿಯವರು, ಸವಿತಾ ಸಮಾಜದವರಿಗೂ ಪರಿಹಾರ ನೀಡಬೇಕು. ಸೋಂಕು ನಿಯಂತ್ರಣಕ್ಕೆ ಬರುವ ವರೆಗೆ ಲಾಕ್‍ಡೌನ್ ಕಟ್ಟುನಿಟ್ಟಾಗಿ ಆಗಲಿ. ಅದಕ್ಕೂ ಮೊದಲು ವಿಶೇಷ ಪ್ಯಾಕೇಜ್ ಘೋಷಣೆಯಾಗಬೇಕು ಎಂದರು.

ಕೊರೊನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಈ ವರೆಗೆ 12 ಪತ್ರಗಳನ್ನು ಬರೆದಿದ್ದೇನೆ. ಯಾವುದಕ್ಕೂ ಉತ್ತರ ನೀಡುವ ಸೌಜನ್ಯ ಮುಖ್ಯಮಂತ್ರಿ ಅವರಿಗೆ ಇಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಜಾಯಮಾನ ಈ ಸರ್ಕಾರಕ್ಕೆ ಇಲ್ಲ ಎಂದು ಅವರು ತಿಳಿಸಿದರು.

Join Whatsapp
Exit mobile version