Home ಟಾಪ್ ಸುದ್ದಿಗಳು ಭಾವನಾತ್ಮಕ ಮೋದಿ ರೈತರ ಸಾವಿನ ವಿಚಾರದಲ್ಲಿ ಮೌನ: ಪ್ರಧಾನಿ ‘ಕಾಲೆಳೆದ’ ಶಿವಸೇನೆ

ಭಾವನಾತ್ಮಕ ಮೋದಿ ರೈತರ ಸಾವಿನ ವಿಚಾರದಲ್ಲಿ ಮೌನ: ಪ್ರಧಾನಿ ‘ಕಾಲೆಳೆದ’ ಶಿವಸೇನೆ

ಮುಂಬೈ: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ 8 ಜನರು ಮೃತಪಟ್ಟ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದನ್ನು ಶಿವಸೇನೆ ಟೀಕಿಸಿದೆ.


ಪ್ರಧಾನಿ ನರೇಂದ್ರ ಮೋದಿಯವರು ಸೂಕ್ಷ್ಮ ಹಾಗೂ ಭಾವನಾತ್ಮಕ ವ್ಯಕ್ತಿ. ಬಡವರ ವಿಚಾರಕ್ಕೆ ಬಂದರೆ ಪ್ರಧಾನಿ ಮೋದಿಯವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಆದರೆ ಲಖಿಂಪುರದಲ್ಲಿ ರೈತರು ದಾರುಣವಾಗಿ ಸಾವನ್ನಪ್ಪಿದ್ದರೂ ಪ್ರಧಾನಿ ಮೋದಿಯವರು ರೈತರ ಬಗ್ಗೆ ಯಾವುದೇ ಸಹನೆ ತೋರುವುದಾಗಲಿ, ಮೃತರಿಗೆ ಸಂತಾಪ ಸೂಚಿಸುವುದಾಗಲೀ ಮಾಡದೇ ಇರುವುದು ಆಶ್ಚರ್ಯವನ್ನುಂಟುಮಾಡಿದೆ ಎಂದು ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ.


ವಿರೋಧ ಪಕ್ಷಗಳ ನಾಯಕರನ್ನು ಲಖಿಂಪುರಕ್ಕೆ ಭೇಟಿ ನೀಡದಂತೆ ತಡೆಯುತ್ತಿರುವ ಉತ್ತರಪ್ರದೇಶ ಸರ್ಕಾರದ ಕ್ರಮವನ್ನು ಶಿವಸೇನೆ ಟೀಕಿಸಿದೆ. ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಮೃತ ರೈತರ ಕುಟುಂಬದವರನ್ನು ಭೇಟಿಯಾಗುವುದನ್ನು ತಡೆಯುತ್ತಿರುವುದನ್ನು ಅಘೋಷಿತ ತುರ್ತು ಪರಸ್ಥಿತಿ ಎಂದು ಶಿವಸೇನಾ ಮಾಧ್ಯಮ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ. ರೈತರ ಮೇಲೆ ದರ್ಪ ತೋರುವುದು ಹಾಗೂ ರೈತರ ಬೆಂಬಲಕ್ಕೆ ನಿಲ್ಲುವವರ ಧ್ವನಿ ಅಡಗಿಸುವುದು ಬಿಜೆಪಿಯ ಕಾರ್ಯತಂತ್ರವಾಗಿದೆ ಎಂದು ರಾವತ್ ಟೀಕಿಸಿದ್ದಾರೆ.


ಲಖಿಂಪುರ ಘಟನೆಯನ್ನು ಬಾಬು ಗೇನು ಘಟನೆಗೆ ರಾವತ್ ಹೋಲಿಸಿದ್ದಾರೆ. ಮುಂಬೈನಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹೋರಾಟಗಾರರ ಮೇಲೆ ಬ್ರಿಟಿಷರು ಟ್ರಕ್ ಹರಿಸಿದ ಸಂಗತಿಯನ್ನು ಲಖಿಂಪುರ ಘಟನೆಗೆ ರಾವತ್ ಹೋಲಿಸಿದ್ದಾರೆ.


ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಉತ್ತರಪ್ರದೇಶದ ಸಚಿವ ಅಜಯ್ ಕುಮಾರ್ ಮಿಶ್ರಾ ಇತ್ತೀಚೆಗೆ ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರ ತವರು ಕ್ಷೇತ್ರ ಲಖಿಂಪುರ ಖೇರಿಯಲ್ಲಿ ಸಚಿವರ ಹೇಳಿಕೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ ರಸ್ತಾ ರೋಖೋ ನಡೆಸುತ್ತಿದ್ದ ರೈತರ ಮೇಲೆ ಸಚಿವರ ಬೆಂಗಾವಲು ವಾಹನ ಹರಿಸಲಾಗಿತ್ತು. ಈ ಘಟನೆ ನಡೆದ ಸಂದರ್ಭ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಕಾರಿನಲ್ಲಿದ್ದ ಎಂದು ಹೇಳಲಾಗುತ್ತಿದೆ. ಸಚಿವರ ಪುತ್ರ ಅಶೀಶ್ ವಿರುದ್ದ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Join Whatsapp
Exit mobile version