Home ಕರಾವಳಿ ಕೋವಿಡ್ ನಂತೆ ಬ್ಲ್ಯಾಕ್ ಫಂಗಸ್ ಚಿಕಿತ್ಸೆಯಲ್ಲಿ ವೈಫಲ್ಯವಾಗದಂತೆ ಎಚ್ಚರ ವಹಿಸಿ : ರಮಾನಾಥ ರೈ

ಕೋವಿಡ್ ನಂತೆ ಬ್ಲ್ಯಾಕ್ ಫಂಗಸ್ ಚಿಕಿತ್ಸೆಯಲ್ಲಿ ವೈಫಲ್ಯವಾಗದಂತೆ ಎಚ್ಚರ ವಹಿಸಿ : ರಮಾನಾಥ ರೈ

ಕೊರೋನಾ ಸೋಂಕಿನ ಎರಡನೇ ಅಲೆಯಂತೆ ಬ್ಲ್ಯಾಕ್ ಫಂಗಸ್ ಸೋಂಕು ಪತ್ತೆ, ಚಿಕಿತ್ಸೆ,ನಿರ್ವಹಣೆಯಲ್ಲಿ ತ್ವರಿತ ಕ್ರಮಗೊಳ್ಳುವ ಮೂಲಕ ಶಿಲೀಂದ್ರ ಕಾಯಲೆ ಉಲ್ಬಣಿಸದಂತೆ ಸರಕಾರ ಕಾರ್ಯಪ್ರವೃತ್ತರಾಗಬೇಕು ಹಾಗೂ ಔಷಧಿಯ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.


ಬೆಂಗಳೂರು, ಮಂಗಳೂರು, ರಾಯಚೂರು ಸೇರಿದಂತೆ ರಾಜ್ಯದಲ್ಲಿ ಹಲವೆಡೆ ಬ್ಲ್ಯಾಕ್ ಫಂಗಸ್ ಮತ್ತು ವೈಟ್ ಫಂಗಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯ ಸರಕಾರ ಕೇಂದ್ರದ ನೆರವಿಗೆ ಕಾಯದೆ ಅಗತ್ಯ ಔಷಧಿಯ ವ್ಯವಸ್ಥೆ ಮಾಡಬೇಕು.ರಾಜ್ಯದಲ್ಲಿ ಈಗಾಗಲೇ 250ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ ಆಗಿದ್ದು, ಬ್ಲ್ಯಾಕ್ ಫಂಗಸ್ ಸೋಂಕಿನ ಚಿಕಿತ್ಸೆಗಾಗಿ ನೀಡಲಾಗುವ ಆಂಪೊಟೆರಿಸಿನ್ ಇಂಜೆಕ್ಷನ್ ವೈಲ್ ಕೊರತೆ ಆಗದಂತೆ ರಾಜ್ಯ ಸರಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಿ.ರಾಮಾನಾಥ ರೈ ಅವರು ಮಂಗಳೂರು ಇಂದಿರಾ ಭವನದಲ್ಲಿ ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬ್ಲ್ಯಾಕ್ ಫಂಗಸ್ ಸೋಂಕಿತ ಒಬ್ಬ ರೋಗಿಗೆ ಆಂಪೊಟೆರಿಸಿನ್ 40-60 ವೈಲ್ ಗಳು ಬೇಕಾಗುತ್ತವೆ ಎನ್ನಲಾಗಿದ್ದು, ಕೊರತೆಯಾಗುವ ಔಷಧಿಗೆ ಕೇಂದ್ರ ಸರ್ಕಾರವನ್ನು ಕಾಯಬಾರದು. ಕೇಂದ್ರ ಸರಕಾರ ಎಲ್ಲ ವಿಚಾರದಲ್ಲೂ ನಮ್ಮ ರಾಜ್ಯದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದೊಂದು ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದ್ದು, ಸರಕಾರ ಕೂಡಲೇ 25 ಸಾವಿರ ವೈಲ್ ಗೆ ತರಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ಬ್ಲ್ಯಾಕ್ ಫಂಗಸ್ ಕಾಯಿಲೆಯ ಚಿಕಿತ್ಸೆಯನ್ನು ರಾಜ್ಯದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಗೆ ಸೇರಿಸಬೇಕು ಮತ್ತು ಆರೋಗ್ಯ ವಿಮಾ ಯೋಜನೆಯಡಿಯಲ್ಲೂ ರೋಗಿಗಳು ಪ್ರಯೋಜನೆ ಪಡೆಯುವಂತೆ ಮಾಡಬೇಕು ಎಂದು ಹೇಳಿದ್ದಾರೆ.
ಇಂತಹ ಶಿಲೀಂದ್ರ ಸೋಂಕುಗೆ ಶುದ್ಧ ಕುಡಿಯುವ ನೀರಿನ ಕೊರತೆ ಮತ್ತು ಸ್ವಚ್ಛತೆಯ ಕೊರತೆಯೂ ಕಾರಣವಾಗಿದೆ. ಒಂದೆಡೆ ಕೊರೊನಾ ಸೋಂಕಿನಿಂದಾಗಿ ಮತ್ತು ಮಧುಮೇಹ ಕಾರಣದಿಂದ ಜನರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಿದೆ. ಆದುದರಿಂದ, ಸರಕಾರ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಹಿತ ಎಲ್ಲ ರೀತಿಯಲ್ಲೂ ಶುಚಿತ್ವ ಪಾಲಿಸಲು ಕ್ರಮ ಕೈಗೊಳ್ಳಬೇಕು ಎಂದು ರಮಾನಾಥ ರೈ ಹೇಳಿದರು.


ಆಲೋಪಥಿ ವಿರುದ್ಧ ಅಪಪ್ರಚಾರ
:
ಅಧಿಕಾರದಲ್ಲಿ ಇರುವವರು ಮತ್ತು ಆಡಳಿತ ಪಕ್ಷದಿಂದ ಲಾಭ ಪಡೆದುಕೊಳ್ಳುತ್ತಿರುವವರು ವಿಶ್ವದಲ್ಲೇ ಅತಿ ಜನಪ್ರಿಯವಾದ ಅಲೋಪಥಿ ವೈದ್ಯಕೀಯ ಪದ್ದತಿ ವಿರುದ್ಧ ಜನರಿಗೆ ಸಂಶಯ ಬರುವ ರೀತಿಯಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ. ಇದು ಅತ್ಯಂತ ಖಂಡನೀಯವಾಗಿದ್ದು, ಸರಕಾರ ಇದರ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ ಎಂದು ಮಾಜಿ ಸಚಿವರು ಹೇಳಿದರು.


ನಕಲಿ ಟೂಲ್ ಕಿಟ್
:
ಬಿಜೆಪಿ ಮುಖಂಡರು ಸಿದ್ಧಪಡಿಸಿದ ನಕಲಿ ಟೂಲ್ ಕಿಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕಾಂಗ್ರೆಸ್ ಪಕ್ಷವು ಈ ಪ್ರಕರಣವನ್ನು ತಾರ್ಕಿಕ ಫಲಿತಾಂಶಕ್ಕೆ ಕೊಂಡೊಯ್ಯಲಿದೆ. ಬಿಜೆಪಿಯವರ ಅಪಪ್ರಚಾರವನ್ನು ಜನರಿಗೆ ಮನವರಿಕೆ ಮಾಡಲಾಗುವುದು ಎಂದ ರಮಾನಾಥ ರೈ ಅವರು, ಬಿಜೆಪಿಯ ಸ್ಥಳೀಯ ಮುಖಂಡರು ನಕಲಿ ಟೂಲ್ ಕಿಟ್ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದನ್ನು ಇನ್ನಾದರು ನಿಲ್ಲಿಸಬೇಕು. ಅದೇ ರೀತಿಯಲ್ಲಿ ವಾಸ್ತವವನ್ನು ಅರಿತು ಕ್ರಮಕೈಗೊಂಡ ಟ್ವಿಟ್ಟರ್ ಸೋಶಿಯಲ್ ಮಿಡಿಯ ವಿರುದ್ಧ ಕಿರುಕುಳ ನೀಡುವುದನ್ನು ಸರಕಾರ ನಿಲ್ಲಿಸಬೇಕು ಎಂದವರುಹ ಹೇಳಿದರು.
ಅಂತರಾಷ್ಟ್ರೀಯ ಮಾಧ್ಯಮಗಳು, ಸೋಶಿಯಲ್ ಮಿಡಿಯಾ ಇವರ ಬಗ್ಗೆ ಬರೆದಾಗ ಅವುಗಳು ಸ್ವಾಗತಾರ್ಹ. ಇವರ ಸರಕಾರದ ಬಗ್ಗೆ ಟೀಕೆ ಮಾಡಿದಾಗ ವರದಿಗಾರ, ಮಾಧ್ಯಮ ಸಂಸ್ಥೆ, ಸೋಶಿಯಲ್ ಮಿಡಿಯಾಗಳನ್ನು ಗುರಿಮಾಡಿ ವೈಯಕ್ತಿಕ ದಾಳಿ ನಡೆಸಲಾಗುತ್ತಿದೆ. ಆರೋಗ್ಯ ಸಮಸ್ಯೆಯಿಂದ ಜನರು ಸಂಕಷ್ಟದಲ್ಲಿದ್ದರೂ ಆಡಳಿತ ಪಕ್ಷಕ್ಕೆ ಅವರ ವರ್ಚಸ್ಸೇ ಮುಖ್ಯ ವಿಚಾರವಾಗಿದೆ ಎಂದು ರಮಾನಾಥ ರೈ ಹೇಳಿದರು.


ಸ್ಥಳೀಯರಿಗೆ ಉದ್ಯೋಗ
:
ಹಿಂದಿನ ನಮ್ಮ ಮುಖಂಡರಾದ ಉಳ್ಳಾಲ ಶ್ರೀನಿವಾಸ ಮಲ್ಯ, ಟಿ.ಎ.ಪೈ, ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಡಿಂಸ್, ವೀರಪ್ಪ ಮೊಯ್ಲಿ ಅವರುಗಳಿಂದ ನವಮಂಗಳೂರು ಬಂದರಿನಿಂದ ಎಂಆರ್ಪಿಎಲ್ ತನಕ ಹಲವು ಸಂಸ್ಥೆಗಳು ಇಲ್ಲಿಗೆ ಬಂದಿವೆ. ಈಗ ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗಿಯವರಿಗೆ ವಹಿಸಲಾಗಿದ್ದು, ನವಮಂಗಳೂರು ಬಂದರು ಮಾರಾಟವಾಗುವ ಭೀತಿಯಲ್ಲಿದೆ. ಹೊಸತು ಏನನ್ನೂ ಮಾಡಲಾಗದಿದ್ದರೂ ಕನಿಷ್ಟ ಸ್ಥಳೀಯರಿಗೆ ಉದ್ಯೋಗ ದೊರಕಿಸುವ ಕೆಲಸವನ್ನಾದರು ಇಂದಿನ ಸಂಸದರು ಮಾಡುವಂತಾಗಲಿ ಎಂದವರು ಹೇಳಿದರು.


ಆವಶ್ಯ ಸಾಮಾಗ್ರಿ ಖರೀದಿ
:
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆವಶ್ಯ ಸಾಮಾಗ್ರಿ ಖರೀದಿಗೆ ಸಮಯಾವಕಾಶದ ಕೊರತೆಯಾಗಿದ್ದು, ಬೆಳಗ್ಗೆ ಗಂಟೆ 9ಕ್ಕೆ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸರಕಾರದ ಕೊರೊನಾ ನಿಯಂತ್ರಣ ಕ್ರಮಗಳು ಗೊಂದಲಕಾರಿಯಾಗಿದೆ. ಜನತಾ ಕರ್ಫ್ಯೂ, ಕಠಿಣ ಜನತಾ ಕರ್ಫ್ಯೂ ಇತ್ಯಾದಿ ಹೆಸರುಗಳಿಂದ ಕರೆದು ದಿನಸಿಸ ಅಂಗಡಿಗಳನ್ನು ಬೆಳಗ್ಗೆ 9ಕ್ಕೆ ಬಂದ್ ಮಾಡಿಸಿ ಬ್ಯಾಂಕ್ ಕಚೇರಿಗಳನ್ನು 10 ಗಂಟೆಗೆ ತೆರೆಯಲು ಅವಕಾಶ ನೀಡಲಾಗಿದೆ. ಇದೊಂದು ರಾಷ್ಟ್ರೀಯ ವಿಪತ್ತು ಆಗಿದ್ದು, ಕೇಂದ್ರ ಸರಕಾರ ಹೆಚ್ಚಿನ ಹೊಣೆಯನ್ನು ವಹಿಸಿಕೊಂಡು ಜನರಿಗೆ ಆಹಾರ ಕಿಟ್ಟುಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಹರಿನಾಥ್, ಕೆ.ಭಾಸ್ಕರ, ಶಶಿಧರ ಹೆಗಡೆ, ಕೆಪಿಸಿ ಕಾರ್ಯದರ್ಶಿ ನವೀನ್ ಡಿ ಸೋಜ, ಸದಾಶಿವ ಉಳ್ಳಾ, ಓಬಿಸಿ ಘಟಕದ ಜಿಲ್ಲಾಧ್ಯಕ್ಷ ವಿಶ್ವಾಸ್ ಜಾಸ್, ಮಂಗಳೂರು ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಪ್ರಕಾಶ್ ಸಾಲ್ಯನ್, ಗಣೇಶ್ ಪೂಜಾರಿ, ಶುಭೋದಯ ಆಳ್ವ, ಮಾಜಿ ಕಾರ್ಪೋರೇಟರ್ ಅಪ್ಪಿ, ಶಬೀರ್ ಸಿದ್ಧಕಟ್ಟೆ ಮತ್ತಿತರರು ಉಪಸ್ಥಿತರಿದ್ದರು

Join Whatsapp
Exit mobile version