Home ಟಾಪ್ ಸುದ್ದಿಗಳು ಬಿಜೆಪಿ ಮೈತ್ರಿ ಕಳೆದುಕೊಂಡ ಶಿವಸೇನೆಗೆ 2019-20ರಲ್ಲಿ ದೇಣಿಗೆ ಸಂಗ್ರಹದಲ್ಲಿ ಶೇ.20ರಷ್ಟು ಕುಸಿತ

ಬಿಜೆಪಿ ಮೈತ್ರಿ ಕಳೆದುಕೊಂಡ ಶಿವಸೇನೆಗೆ 2019-20ರಲ್ಲಿ ದೇಣಿಗೆ ಸಂಗ್ರಹದಲ್ಲಿ ಶೇ.20ರಷ್ಟು ಕುಸಿತ

ಮುಂಬೈ : ಸದ್ಯಕ್ಕೆ ಬಿಜೆಪಿ ದೇಶದಲ್ಲಿ ಅತಿ ಹೆಚ್ಚು ದೇಣಿಗೆ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಧಿಕಾರದಲ್ಲಿರುವಾಗ ಪಕ್ಷಗಳಿಗೆ ಕಾರ್ಪೊರೇಟ್‌ ಮೂಲಗಳ ದೇಣಿಗೆ ಹರಿದು ಬರುವುದು ಸಹಜ. ಆದರೆ, ಮಹಾರಾಷ್ಟ್ರದಲ್ಲಿ ಶಿವಸೇನೆ ಅಧಿಕಾರದಲ್ಲಿದ್ದರೂ, ಬಿಜೆಪಿಯ ಮೈತ್ರಿ ಕಳೆದುಕೊಂಡ ಬಳಿಕ ದೇಣಿಗೆ ಸಂಗ್ರಹದಲ್ಲಿ ಕುಸಿತ ಕಂಡಿದೆ.

1999ರ ಬಳಿಕ ಮಹಾರಾಷ್ಟ್ರದಲ್ಲಿ ತನ್ನದೇ ಮುಖ್ಯಮಂತ್ರಿಯನ್ನು ಹೊಂದಿ ಶಿವಸೇನೆ ಅಧಿಕಾರಕ್ಕೆ ಬಂದಿದ್ದರೂ, 2019-20ರ ಪಕ್ಷಗಳ ದೇಣಿಗೆ ಸಂಗ್ರಹದ ಪಟ್ಟಿ ನೋಡಿದರೆ, ಶಿವಸೇನೆ ಹಿಂದಿನ ವರ್ಷಕ್ಕಿಂತ ಶೇ.20ರಷ್ಟು ಕಡಿಮೆ ಮೊತ್ತದ ದೇಣಿಗೆ ಸಂಗ್ರಹಿಸಿದೆ.

ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿರುವ ವರದಿಗಳ ಪ್ರಕಾರ, 2019-20ರಲ್ಲಿ ಶಿವಸೇನೆ 105.64 ಕೋಟಿ ದೇಣಿಗೆ ವೈಯಕ್ತಿಕ ಮತ್ತು ಕಾರ್ಪೊರೇಟ್‌ ಸಂಸ್ಥೆಗಳು, ಎಲೆಕ್ಟ್ರಲ್‌ ಬಾಂಡ್ ಮೂಲಕ ಸಂಗ್ರಹಿಸಿದೆ. 2018-19ರಲ್ಲಿ ಬಿಜೆಪಿ ಮಿತ್ರ ಪಕ್ಷವಾಗಿದ್ದಾಗ, ಶಿವಸೇನೆ 130.96 ಕೋಟಿ ರೂ. ಸಂಗ್ರಹಿಸಿತ್ತು. ಸಾಮಾನ್ಯವಾಗಿ ಚುನಾವಣೆಗಳು ಇದ್ದ ವರ್ಷಗಳಲ್ಲಿ ಪಕ್ಷಗಳಿಗೆ ದೇಣಿಗೆ ಹೆಚ್ಚುತ್ತದೆ. 2019-20 ಚುನಾವಣಾ ವರ್ಷವಾಗಿಯೂ ಶಿವಸೇನೆಗೆ ದೇಣಿಗೆ ಸಂಗ್ರಹ ಕಡಿಮೆಯಾಗಿದೆ.

ಇದೇ ವೇಳೆ, ಕಳೆದ ವರ್ಷ ಬಿಜೆಪಿ 785.77 ಕೋಟಿ ರೂ. ದೇಣಿಗೆ ಸಂಗ್ರಹಿಸಿದೆ. 2018-19ರಲ್ಲಿ ಬಿಜೆಪಿಗೆ 741.98 ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ವರ್ಷ ಬಿಜೆಪಿಯ ದೇಣಿಗೆ ಹೆಚ್ಚಿರುವುದು ಈ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

Join Whatsapp
Exit mobile version