Home ಟಾಪ್ ಸುದ್ದಿಗಳು ಸಂಸದನ ಆತ್ಮಹತ್ಯೆ ಪ್ರಕರಣ | ಪ್ರಫುಲ್ ಪಟೇಲ್ ವಿರುದ್ಧ ದೂರು ದಾಖಲು

ಸಂಸದನ ಆತ್ಮಹತ್ಯೆ ಪ್ರಕರಣ | ಪ್ರಫುಲ್ ಪಟೇಲ್ ವಿರುದ್ಧ ದೂರು ದಾಖಲು

ಮುಂಬೈ : ದಾದ್ರಾ ನಗರ ಹವೇಲಿಯ ಸಂಸದ ಮೋಹನ್ ಡೆಲ್ಕರ್ ಅವರ ಆತ್ಮಹತ್ಯೆಯಲ್ಲಿ ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಮುಂಬೈ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ದೂರು ನೀಡಲಾಗಿದೆ. ಲೋಕ ತಾಂತ್ರಿಕ ಯುವ ಜನತಾದಳ ರಾಷ್ಟ್ರಾಧ್ಯಕ್ಷ ಸಲೀಂ ಮಡವೂರ್ ಈ ಕುರಿತು ರಾಷ್ಟ್ರಪತಿ, ಪ್ರಧಾನಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗೂ ದೂರು ನೀಡಿದ್ದಾರೆ.

ಕಳೆದ ಬಾರಿ ಮೋಹನ್ ಡೆಲ್ಕರ್ ದಾದ್ರಾ ನಗರ ಹವೇಲಿಯಿಂದ ಹಾಲಿ ಸಂಸದರೂ ಆಗಿದ್ದ ಬಿಜೆಪಿ ನಾಯಕ ಪಟೇಲ್ ನಾಥುಭಾಯಿ ಅವರನ್ನು ಸೋಲಿಸಿ ಸ್ವತಂತ್ರವಾಗಿ ಗೆದ್ದಿದ್ದರು. ಫೆಬ್ರವರಿ 22, 2021 ರಂದು ಮೋಹನ್ ಡೆಲ್ಕರ್ ಮುಂಬೈ ಮೆರೈನ್ ಡ್ರೈವ್ ಬಳಿಯ ಹೋಟೆಲ್ ಸೌತ್ ಗ್ರೀನ್ ಹೌಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಲಕ್ಷದ್ವಿಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಮತ್ತು ದಾದ್ರಾ ನಗರ ಹವೇಲಿಯ ಉನ್ನತ ಅಧಿಕಾರಿಗಳನ್ನು ಡೆತ್ ನೋಟ್ ನಲ್ಲಿ ದೂಷಿಸಲಾಗಿತ್ತು.

ತನ್ನ ತಂದೆಗೆ ಪ್ರಫುಲ್ ಪಟೇಲ್ ನಿರಂತರ ಬೆದರಿಕೆಗಳನ್ನು ಹಾಕಿ 25 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಮೋಹನ್ ಡೆಲ್ಕರ್ ಮಗ ಅಭಿನವ್ ಡೆಲ್ಕರ್ ಆರೋಪಿಸಿದ್ದರು. ಆದರೆ, ಮಹಾರಾಷ್ಟ್ರ ವಿಶೇಷ ಪೊಲೀಸ್ ತನಿಖಾ ತಂಡ ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿದೆ ಎಂದು ಸಲೀಂ ಮಡವೂರ್ ದೂರಿನಲ್ಲಿ ತಿಳಿಸಿದ್ದಾರೆ. ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡ ಅಥವಾ ಸಿಬಿಐ ಈ ಪ್ರಕರಣದ ತನಿಖೆ ನಡೆಸಲು ನಿರ್ದೇಶಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Join Whatsapp
Exit mobile version