ಬೆಂಗಳೂರು : ಮಕ್ಕಳು, ಗರ್ಭೀಣಿಯರಿಗೆ ಪೌಷ್ಟಿಕ ಆಹಾರವಾದ ಮೊಟ್ಟೆ ನೀಡುವ ಯೋಜನೆಯಡಿ ಲಂಚ ಪಡೆದ ಆರೋಪ ಹೊತ್ತ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ರಾಜಾತಿಥ್ಯ ನೀಡಿ ಮತ್ತೊಮ್ಮೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಹೈಕಮಾಂಡ್ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟಕ್ಕೆ ಇದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಈ ಬೆಳವಣಿಗೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿಯ ಸಂಪುಟ ರಚನೆಯಲ್ಲಿ ಹೆಚ್ಚಿನ ಮಹಿಳಾ ಶಾಸಕರಿಗೆ ಆದ್ಯತೆ ನೀಡಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ಕಳಂಕ ಮೆತ್ತಿಸಿಕೊಂಡಿರುವ ಶಶಿಕಲಾ ಜೊಲ್ಲೆ ಅವರಿಗೆ ಮಣೆ ಹಾಕಿರುವುದು ಬಿಜೆಪಿ ವಲಯದಲ್ಲೇ ಅಸಮಾಧಾನ ಭುಗಿಲೇಳುವಂತೆ ಮಾಡಿದೆ.
ಶಶಿಕಲಾ ಜೊಲ್ಲೆ ಅವರು ಪ್ರಾಮಾಣಿಕವಾಗಿ ಆಡಳಿತ ನೀಡುವುದಾಗಿ ದೇವರು ಮತ್ತು ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಹಿಂದೆಯೂ ಸಹ ಅವರು ಇದೇ ರೀತಿ ಪ್ರತಿಜ್ಞೆ ಮಾಡಿದ್ದರು. ಆದರೆ ಅವರು ಸಂವಿಧಾನಕ್ಕೆ ಅಪಚಾರ ಮಾಡಿದ್ದು, ಮೊಟ್ಟೆ ಹಗರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಶಶಿಕಲಾ ಜೊಲ್ಲೆ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ದೊರೆಯುವುದಿಲ್ಲ ಎಂದು ಮಂಗಳವಾರದವರೆಗೆ ಸುದ್ದಿ ಹರಿದಾಡುತ್ತಿತ್ತು. ಆದರೆ ಕೊನೆ ಕ್ಷಣದಲ್ಲಿ ಅಂದರೆ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ಮಾಡಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಆಗಮಿಸುವಂತೆ ಸೂಚಿಸಿದರು. ಆಗ ಜೊಲ್ಲೆ ಅವರು ಬೆಳಗಾವಿಯಿಂದ ಮುಂಬಯಿಗೆ ತೆರಳಿ ಅಲ್ಲಿಂದ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಆಗಮಿಸಿದರು. ಬರಲು ತಡವಾದ ಕಾರಣ ಜಿರೋ ಟ್ರಾಫಿಕ್ ಮೂಲಕ ಅವರನ್ನು ರಾಜಭವನಕ್ಕೆ ಕರೆಸಿಕೊಳ್ಳಲಾಯಿತು. ಇದು ಸಹ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಹೆಸರನ್ನು ಏಕಾಏಕಿ ತೆಗೆದು ಹಾಕಿದ್ದು, ಶಶಿಕಲಾ ಜೊಲ್ಲೆ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲು ವರಿಷ್ಠರು ತೀರ್ಮಾನಿಸಿದರು. ಮುಂದಿನ ಚುನಾವಣೆ ವೇಳೆಗೆ ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಉದ್ದೇಶಿಸಿದ್ದರು. ಜತೆಗೆ ಕೆ.ಆರ್. ಪುರಂ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಕಣಕ್ಕಿಳಿಯಲು ನಿರ್ಧರಿಸಿದ್ದರು. ತಮ್ಮ ಪತಿ ಶ್ರೀನಿವಾಸ್ ಅವರನ್ನು ಹಿರಿಯೂರಿನಿಂದ ಕಣಕ್ಕಿಳಿಸಲು ರಾಜಕೀಯ ತಂತ್ರಗಾರಿಕೆ ಹೂಡಿದ್ದರು ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪಕ್ಷದ ವರಿಷ್ಠರು ಪೂರ್ಣಿಮಾ ಬದಲು ಜೊಲ್ಲೆ ಅವರಿಗೆ ಅವಕಾಶ ಕಲ್ಪಿಸಿದರು ಎನ್ನಲಾಗಿದೆ.
ಈ ಮಧ್ಯೆ ಸಚಿವ ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳದ ಹಾಗೂ ಶಶಿಕಲಾ ಜೊಲ್ಲೆ ಅವರನ್ನು ಮತ್ತೊಮ್ಮೆ ಸಂಪುಟಕ್ಕೆ ಸೇರಿಸಿಕೊಂಡಿರುವ ಬಗ್ಗೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನ ಪತಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗಲೂ ನಾನು ಪಕ್ಷನಿಷ್ಠೆ ಪಕ್ಷದ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡಿದ್ದೆ. ಶಿರಾ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಕ್ಷಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇನೆ. ಕಳೆದ ಬಸವಕಲ್ಯಾಣ ಉಪಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಆದೇಶದಂತೆ ಕ್ಷೇತ್ರದಲ್ಲಿ ಓಡಾಡಿ ಗೊಲ್ಲ ಸಮುದಾಯದ ಹೆಚ್ಚು ಮತಗಳನ್ನು ಕ್ರೋಢೀಕರಿಸುವಲ್ಲಿ ತಾವು ಮಾಡಿರುವ ಕೆಲಸವನ್ನು ಪಕ್ಷ ಮರೆತಿದೆ ಎಂದು ಹೇಳಿದ್ದಾರೆ.
ಮುಖ್ಯವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಲು ನಮ್ಮ ಸಮುದಾಯದ ಮತಗಳು ಹೆಚ್ಚು ನಿರ್ಣಯವಾಗಿದ್ದವು ಪಕ್ಷ ಅದನ್ನೆಲ್ಲ ಮರೆತಿದೆ. ಹಲವು ಜಿಲ್ಲೆಯ ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಸಮುದಾಯದ ಹಾಗೂ ಇತರೆ ಹಿಂದುಳಿದ ಸಮಾಜಗಳನ್ನು ಸಂಘಟನೆ ಮಾಡಿ ಪಕ್ಷಕ್ಕೆ ಹೆಚ್ಚು ಮತಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಎಲ್ಲವನ್ನು ಮರೆತು ಪಕ್ಷ ಈಗ ಜಾಣ ಕುರುಡರಂತೆ ವರ್ತಿಸುತ್ತಿರುವುದು ನೋವುಂಟು ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ಗೊಲ್ಲ ಸಮುದಾಯದಿಂದ ಏಕೈಕ ವಿಧಾನಸಭಾ ಜನಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸಿದ್ದ ನಾನು ಎಂದು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಇರಲಿಲ್ಲ, ಯಾವುದೇ ಹಗರಣ ನನ್ನ ಸುತ್ತಿ ಕೊಂಡಿರಲಿಲ್ಲ ಇಂದು ಪಕ್ಷ ತೆಗೆದುಕೊಂಡಿರುವ ನಿರ್ಧಾರ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ಹಗರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವರಿಗೆ ಮತ್ತೆ ಸಚಿವ ಸ್ಥಾನ ನೀಡಿ ಒಂದೇ ಮನೆಯಲ್ಲಿ ಎರಡು ಮೂರು ಅಧಿಕಾರ ನೀಡಿದೆ. ಯಾವುದೇ ಹಗರಣ ಇಲ್ಲದೆ ಇರುವ ಇನ್ನೊಬ್ಬ ಮಹಿಳೆಗೂ ಸಚಿವ ಸ್ಥಾನ ನೀಡಿದರೆ ಯಾವುದೇ ಬೇಜಾರಿರಲಿಲ್ಲ. ಸ್ವಂತ ಬಲದಿಂದ ಗೆದ್ದಿರುವ ನನಗೂ ಹಾಗೂ ಇನ್ನೊಬ್ಬ ಮಹಿಳಾ ಶಾಸಕಿ ಯವರಿಗೂ ಇದು ಪಕ್ಷ ಮಾಡುತ್ತಿರುವ ದೊಡ್ಡ ಅವಮಾನ. ಚಿತ್ರದುರ್ಗ ಜಿಲ್ಲೆಯಲ್ಲಿ ಗೂಳಿಹಟ್ಟಿ ಶೇಖರ್, ಚಂದ್ರಪ್ಪ ಅವರಂತಹ ಹಿರಿಯ ನಾಯಕರು ಮತ್ತು ಆರು ಬಾರಿ ಗೆದ್ದಂತಹ ತಿಪ್ಪಾರೆಡ್ಡಿ ಅವರಿಗಾದರೂ ಸಚಿವ ಸ್ಥಾನ ನೀಡಬಹುದಿತ್ತು.
ಇದು ಪಕ್ಷವು ನಮ್ಮ ಜಿಲ್ಲೆಗೆ ಮಾಡುತ್ತಿರುವ ಅವಮಾನ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ರಾಜ್ಯದ ಗೊಲ್ಲ ಸಮುದಾಯವು 80ರಷ್ಟು ಭಾಗವು ಬಿಜೆಪಿಗೆ ಮತ ನೀಡಿರುವುದನ್ನು ಪಕ್ಷ ಮರೆಯಬಾರದು. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಗೊಲ್ಲ ಸಮುದಾಯದ ಮತಗಳಿದ್ದು,ಒಂದು ಸ್ಥಾನ ನೀಡದೇ ಇರುವುದು ತುಂಬಾ ನೋವುಂಟು ಮಾಡಿದೆ ಎಂದು ಹೇಳಿಕೊಂಡಿದ್ದಾರೆ.