Home ಮಾಹಿತಿ ದಶಮಾನೋತ್ಸವ ಸಂಭ್ರಮದಲ್ಲಿ ಶಂಕರ ಕ್ಯಾನ್ಸರ್ ಆಸ್ಪತ್ರೆ-ಸಂಶೋಧನಾ ಕೇಂದ್ರ

ದಶಮಾನೋತ್ಸವ ಸಂಭ್ರಮದಲ್ಲಿ ಶಂಕರ ಕ್ಯಾನ್ಸರ್ ಆಸ್ಪತ್ರೆ-ಸಂಶೋಧನಾ ಕೇಂದ್ರ

►70 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ: ಡಾ ಬಿ.ಎಸ್.ಶ್ರೀ ನಾಥ್

ಬೆಂಗಳೂರು: ಎಪ್ಪತ್ತು ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿ, ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ, ದೇಶದಲ್ಲೇ ಮೊದಲ ಖಾಸಗಿ ಚಾರಿಟೇಬಲ್ ಆಸ್ಪತ್ರೆ ಎಂಬ ಹೆಗ್ಗಳಿಕೆಯ, ಕರ್ನಾಟಕದ ಆರೋಗ್ಯ ಸಂಸ್ಥೆ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ತನ್ನ ಅರ್ಪಿತ ಸೇವೆಯ ದಶಮಾನೋತ್ಸವದ ಸಂಭ್ರಮದಲ್ಲಿದೆ.

520 ಬೆಡ್‍ ಗಳಿರುವ, ಸರ್ವ ಸುಸಜ್ಜಿತ, ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸೆ ನೀಡುವ ಹಾಗೂ ಎಲ್ಲರಿಗೂ, ಎಲ್ಲಾ ವರ್ಗದ ಜನರಿಗೂ, ಎಲ್ಲಾ ಬಗೆಯ ಕ್ಯಾನ್ಸರ್ ಕಾಯಿಲೆಗಳಿಗೂ ಚಿಕಿತ್ಸೆ, ಪರಿಹಾರ, ನಿರಂತರ ಸಂಶೋಧನೆಯ ಮೂಲಕ ಕ್ಯಾನ್ಸರ್ ಎಂಬ ಮಾರಿಯನ್ನು ತೊಲಗಿಸುವ ಏಕೈಕ ದಿಟ್ಟ ಹೆಜ್ಜೆಯಾಗಿ ಕರ್ನಾಟಕ ರಾಜ್ಯದ ಹೆಮ್ಮೆ, ರಾಜಧಾನಿ ಬೆಂಗಳೂರಿನ ಹೃದಯ ಭಾಗ ಬಸವಗುಡಿಯ ಶಂಕರಪುರಂನಲ್ಲಿ ಈಗ್ಗೆ 10 ವರ್ಷಗಳ ಹಿಂದೆ ಸ್ಥಾಪಿಸಲಾಗಿರುವ ಈ ಆಸ್ಪತ್ರೆ ಇದೀಗ ಹತ್ತರ ಹುಮ್ಮಸ್ಸಿನಲ್ಲಿ ಸೇವೆಯನ್ನು ನೀಡುತ್ತಿದೆ.

   ಶೃಂಗೇರಿಯ ದಕ್ಷಿಣಾನ್ಮಾಯ ಶಾರದಾ ಪೀಠದ ಜಗದ್ಗುರು, ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂ ಅವರ ಶುಭಾಶೀರ್ವಾದಗಳೊಂದಿಗೆ ಆರಂಭಗೊಂಡು, ಖ್ಯಾತ ವೈದ್ಯ ಡಾ. ಬಿ.ಎಸ್.ಶ್ರೀನಾಥ್ ಅವರ ಸಮರ್ಥ ನಾಯಕತ್ವದಲ್ಲಿ, ಉತ್ಸಾಹಿ ಪರಿಣಿತ ವೈದ್ಯ, ವೈದ್ಯಕೇತರ ಸಿಬ್ಬಂದಿಗಳ ಕಾರ್ಯಕ್ಷಮತೆಯೊಂದಿಗೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆ ಇಟ್ಟಿದೆ.

ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಇದನ್ನು 2008ರಲ್ಲಿ ಸ್ಥಾಪಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳ ಐವರು ಸ್ಥಾಪಕ ಟ್ರಸ್ಟಿಗಳನ್ನು ಒಳಗೊಂಡ ಈ ಫೌಂಡೇಶನ್‍ ನ ಮುಖ್ಯ ಉದ್ದೇಶ ಸಮಾಜದಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ, ಶೈಕ್ಷಣಿಕ ಅಥವಾ ಸಾಮಾಜಿಕ-ಆರ್ಥಿಕ ಸ್ಥಾನಮಾನವನ್ನು ನೋಡದೆ ಎಲ್ಲಾ ಕ್ಯಾನ್ಸರ್ ರೋಗಿಗಳಿಗೂ ಅನುಕೂಲ ಆಗುವಂತಹ ಅತ್ಯಾಧುನಿಕ, ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವ ಕ್ಯಾನ್ಸರ್ ಆಸ್ಪತ್ರೆಯನ್ನು ಸ್ಥಾಪಿಸುವುದಾಗಿದೆ ಎಂದು ವೈದ್ಯ ಬಿ.ಎಸ್ ಶ್ರೀನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ಮಾಣ ಕಾರ್ಯವನ್ನು 2010ರ ಅಕ್ಟೋಬರ್‌ ನಲ್ಲಿ ಆರಂಭಿಸಲಾಯಿತು.

ಪರೋಪಕಾರಿಗಳು, ಸಂಘ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಸರ್ಕಾರಗಳ ಉದಾರ ದೇಣಿಗೆಯಿಂದಾಗಿ ಆಸ್ಪತ್ರೆಯನ್ನು ನಿರ್ಮಿಸುವುದು ಸಾಧ್ಯವಾಗಿದೆ. ಎಸ್‍ ಎಸ್‍ ಸಿಎಚ್‍ ಆರ್‍ ಸಿ ವತಿಯಿಂದ ಕಟ್ಟಡದ ಮೇಲಂತಿಸ್ತಿನ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗಲೂ ರೋಗಿಗಳಿಗೆ ನೀಡುವ ಸೇವೆ ಮುಂದುವರಿಯಿತು. ಸೇವೆ ನೀಡುತ್ತಲೇ ಎಲ್ಲಾ ಸೌಲಭ್ಯಗಳನ್ನೂ ಕಲ್ಪಿಸುವ ಕಾರ್ಯವೂ ಪೂರ್ಣಗೊಂಡಿತು. 520 ಹಾಸಿಗೆಗಳ, ಸಮಗ್ರ ಕ್ಯಾನ್ಸರ್ ಚಕಿತ್ಸೆಯನ್ನು ಒದಗಿಸುವ ಆಸ್ಪತ್ರೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಆಸ್ಪತ್ರೆ ಇದುವರೆಗೆ 70 ಸಾವಿರಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿದೆ ಎಂದು ಮಾಹಿತಿ ನೀಡಿದರು.

ಎಸ್‍ ಎಸ್‍ ಸಿಎಚ್‍ ಆರ್‍ ಸಿಯಲ್ಲಿ ಕ್ಯಾನ್ಸರ್ ಕಾಳಜಿ ಕ್ಷೇತ್ರದ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ಅತ್ಯಾಧುನಿಕ ರೇಡಿಯೊಥೆರಪಿಗಾಗಿ ಲೈನಿಯರ್ ಎಕ್ಸಿಲರೇಟರ್, ರೊಬೊಟಿಕ್ ಸರ್ಜರಿ ಕೇಂದ್ರದ ಜತೆಗೆ 9 ಶಸ್ತ್ರಚಿಕಿತ್ಸಾ ಕೊಠಡಿಗಳು, ಪ್ರತ್ಯೇಕ 33 ಹಾಸಿಗೆಗಳ ಡೇ ಕೇರ್ ಕಿಮೋಥೆರಪಿ ಘಟಕದ ಜತೆಗೆ ಮೆಡಿಕಲ್ ಆಂಕಾಲಜಿ, 40 ಹಾಸಿಗೆಗಳ ಪೇಡಿಯಾಟ್ರಿಕ್ ಆಂಕಾಲಜಿ ಘಟಕ ಹಾಗೂ ಅತ್ಯಾಧುನಿಕ ಅಸ್ಥಿಮಜ್ಜೆ ಕಸಿ (ಬೋನ್ ಮ್ಯಾರೊ ಟ್ರಾನ್ಸ್‍ಪ್ಲಾಂಟೇಷನ್) ಕೇಂದ್ರಗಳನ್ನು ಸಂಸ್ಥೆ ಹೊಂದಿದೆ. ಜತೆಗೆ ಸ್ತನ ಕಾಯಿಲೆಗಳು ಮತ್ತು ಶ್ವಾಸಕೋಶ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಪ್ರತ್ಯೇಕ ಕೇಂದ್ರವನ್ನೂ ಸ್ಥಾಪಿಸಲಾಗಿದೆ ಎಂದು ತಿಳಿಸಿದರು

ರೋಗಿಗಳ ಯೋಗಕ್ಷೇಮ ನೋಡಿಕೊಳ್ಳಲು ಬಂದವರಿಗಾಗಿ ಆಸ್ಪತ್ರೆಯ ಆವರಣದೊಳಗೆಯೇ ವಿಶ್ರಾಂತಿ ಸೌಲಭ್ಯ, ಐಸಿಯುನಲ್ಲಿರುವ ರೋಗಿಗಳ ಸಂಬಂಧಿಗಳಿಗಾಗಿ ಶಸ್ತ್ರಚಿಕಿತ್ಸಾ ಕೊಠಡಿಯ ಸಮೀಪದಲ್ಲೇ ಆಹಾರ ಸೌಲಭ್ಯದ ಜತೆಗೆ ನಿರೀಕ್ಷಣಾ ಕೊಠಡಿ, ಮಕ್ಕಳಿಗೆ ಆಟವಾಡಲು ಸ್ಥಳ, ಕ್ಯಾನ್ಸರ್ ಪೀಡಿತ ಮಕ್ಕಳ ಆರೈಕೆಗಾಗಿ ಬರುವ ಪೋಷಕರಿಗೆ ಉಳಿದುಕೊಳ್ಳಲು ವ್ಯವಸ್ಥೆ ಹಾಗೂ ಡೇ ಕೇರ್ ಕಿಮೋಥೆರಪಿ ವ್ಯವಸ್ಥೆಗಳಿಂದಾಗಿ ರೋಗಿಗಳಿಗೆ ಬಹಳ ಅನುಕೂಲವಾಗಿದೆ ಎಂದು ಹೇಳಿದರು.

 ಶಂಕರ ಆಯುರ್ ಏಡ್ ಸೆಂಟರ್ ಫಾರ್ ಇಂಟಗ್ರೇಟಿವ್ ಆಂಕಾಲಜಿ ಹಾಗೂ ಕಾಯಿಲೆ ಸಂಬಂಧಿತ ಗುಂಪು ಥೆರಪಿ ಕಾರ್ಯಕ್ರಮಗಳ ಅಡಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಮಾನಸಿಕ ದೃಢತೆಗಾಗಿ ನೀಡುವ ಸೈಕೋ ಆಂಕಾಲಜಿ ಸೇವೆ ಈ ಆಸ್ಪತ್ರೆಯ ಅತ್ಯಂತ ವಿಶೇಷ ಸೇವೆಗಳಲ್ಲಿ ಒಂದು. ಜತೆಗೆ ರೋಗಿಗಳಿಗೆ ಅವರ ಮನೆಗಳಲ್ಲೇ ಆರೈಕೆ ನೀಡುವಂತಹ ಡೊಮಿಸಿಲಿಯರಿ ಕೇರ್, ಯೋಗ ಥೆರಪಿ, ಮ್ಯೂಸಿಕ್ ಥೆರಪಿ, ಆಯುರ್ವೇದಿಕ್ ಥೆರಪಿಗಳನ್ನೂ ಇಲ್ಲಿ ನೀಡಲಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಅವರಿಗೆ ಪಾಠ ಬೋಧನೆಯ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗಿದ್ದು, ಇದು ಬಹಳಷ್ಟು ರೋಗಿಗಳಿಗೆ ಅನುಕೂಲ ಕಲ್ಪಿಸಿದೆ ಎಂದರು.

 ನಿತ್ಯ ಅನ್ನದಾನ ಯೋಜನೆಯ ಅಡಿಯಲ್ಲಿ ಎಲ್ಲಾ ಜನರಲ್ ವಾರ್ಡ್ ರೋಗಿಗಳಿಗೆ ಉಚಿತವಾಗಿ ಅತ್ಯಂತ ಪೌಷ್ಟಿಕ, ವೈಯಕ್ತಿಕವಾಗಿ ಕಾಳಜಿ ವಹಿಸಿದಂತಹ ಊಟವನ್ನು ಒದಗಿಸಲಾಗುತ್ತಿದೆ ಎಂದರು.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ನುರಿತ ಹಾಗೂ ಸೂಪರ್ ಸ್ಪೆಷಾಲಿಟಿಗಳಲ್ಲಿ ಪಳಗಿದ ಖ್ಯಾತ ವೈದ್ಯರು ಅತ್ಯುನ್ನತ ನೈತಿಕ ಮಟ್ಟದಲ್ಲಿ ಕ್ಯಾನ್ಸರ್ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಜೀನ್ ಸೀಕ್ವೆನ್ಸಿಂಗ್, ಟ್ಯೂಮರ್ ಸೆಲ್ ಲೈನ್ ಕಲ್ಚರ್, ಮಾಸ್ ಸ್ಪಕ್ಟೋಸ್ಕೋಪಿ ಸೌಲಭ್ಯದೊಂದಿಗೆ ಅತ್ಯಾಧುನಿಕ ಸಂಶೋಧನಾ ಪ್ರಯೋಗಾಲಯವನ್ನೂ ಫೌಂಡೇಶನ್ ಸ್ಥಾಪಿಸಿದೆ. ಇದರಿಂದ ಕ್ಯಾನ್ಸರ್ ಪತ್ತೆಹಚ್ಚುವಿಕೆಗೆ ಹಾಗೂ ವೈಯಕ್ತಿಕವಾಗಿ ರೋಗಿಗೆ ಸದ್ಯ ಎಂತಹ ಆರೈಕೆಯ ಅಗತ್ಯವಿದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಶ್ರೀ ಶಂಕರ ನ್ಯಾಷನಲ್ ಸೆಂಟರ್ ಫಾರ್ ಕ್ಯಾನ್ಸರ್ ಪ್ರಿವೆಂಷನ್ ಆಂಡ್ ರೀಸರ್ಚ್ ಸಂಸ್ಥೆಯು ಫೌಂಡೇಶನ್‍ ನ ಇನ್ನೊಂದು ಅಂಗ ಸಂಸ್ಥೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮತ್ತು ಚಿಂತಾಮಣಿ ತಾಲೂಕುಗಳಲ್ಲಿ ಕ್ಯಾನ್ಸರ್ ತಡೆ ಮತ್ತು ಆರಂಭದಲ್ಲೇ ಕ್ಯಾನ್ಸರ್ ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದು, ಆರು ಲಕ್ಷಕ್ಕೂ ಅಧಿಕ ಜನತೆಗೆ ಈ ಕಾರ್ಯಕ್ರಮ ತಲುಪುತ್ತಿದೆ.

ಈ ಎರಡು ತಾಲೂಕುಗಳಲ್ಲಿ ಸಂಸ್ಥೆಯ ವೈದ್ಯರ ತಂಡ, ಕ್ಷೇತ್ರ ಕಾರ್ಯಕರ್ತರು, ದಾದಿಯರು, ಕ್ಲಿನಿಕಲ್ ಮನಶಾಸ್ತ್ರಜ್ಞರು ಮನೆ ಮನೆಗೆ ತೆರಳಿ ಪರೀಕ್ಷೆಗಳನ್ನು ನಡೆಸುತ್ತಾರೆ ಹಾಗೂ ಕ್ಯಾನ್ಸರ್ ಅಪಾಯ ಎದುರಾಗುವ ಕುರಿತು ಮನೆ ಮಂದಿಗೆ ತಿಳಿವಳಿಕ ನೀಡುತ್ತಾರೆ. ಫೌಂಡೇಶನ್ ವತಿಯಿಂದ ಕ್ಯಾನ್ಸರ್‍ನ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಈ ಎರಡು ತಾಲೂಕುಗಳಲ್ಲಿ ಕ್ಯಾನ್ಸರ್‍ಗೆ ತುತ್ತಾದ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು

ಸಂಸ್ಥೆಯ ದಶಮಾನೋತ್ಸವ ಸಂಭ್ರಮವು ಇಂದು “ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಕ್ಯಾನ್ಸರ್ ಕಾಳಜಿ’ ಎಂಬ ವಿಚಾರ ಸಂಕಿರಣದ ಮೂಲಕ ಆರಂಭವಾಗಲಿದೆ. ಸುಪ್ರೀಂ ಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ  ಎಂ.ಎನ್.ವೆಂಕಟಾಚಲಯ್ಯ ಅವರು ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆಯ ಹತ್ತು ವರ್ಷಗಳ ಪಯಣವನ್ನು ಪರಿಚಯಿಸುವ ಹಾಗೂ ದಾನಿಗಳು, ರೋಗಿಗಳು ಮತ್ತು ಹಿತೈಷಿಗಳಿಗೆ ಸಮರ್ಪಿಸಲು ಸಿದ್ಧಪಡಿಸಿದಂತಹ ಕೈಪಿಡಿಯನ್ನು ಗೌರವಾನ್ವಿತ ನ್ಯಾಯಮೂರ್ತಿ ಅವರು ಬಿಡುಗಡೆ ಮಾಡಿದರು

ಖ್ಯಾತ ಉದ್ಯಮಿಗಳು, ಲೇಖಕರು ಹಾಗೂ ಪರೋಪಕಾರಿಗಳಾದ ಸುಶ್ಮಿತಾ ಬಾಗ್‍ ಚಿ ಮತ್ತು ಸುಬ್ರೊತೊ ಬಾಗ್‍ ಚಿ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದರು. “ಕೈಗೆಟುಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಕ್ಯಾನ್ಸರ್ ಆರೈಕೆಯನ್ನು ಸಾಧಿಸುವುದು-ಚಾರಿಟೇಬಲ್ ಕ್ಯಾನ್ಸರ್ ಸಂಸ್ಥೆಗಳ ಸವಾಲುಗಳು’ ಎಂಬ ವಿಷಯದ ಮೇಲಿನ ವಿದ್ವತ್ ಚರ್ಚೆಯಲ್ಲಿ ದೇಶದಾದ್ಯಂತದ ವಿವಿಧ ಚಾರಿಟೇಬಲ್ ಕ್ಯಾನ್ಸರ್ ಆಸ್ಪತ್ರೆಗಳ ಹಿರಿಯ ಬೋಧಕರು ಮತ್ತು ಆಡಳಿತಾಧಿಕಾರಿಗಳು ಪಾಲ್ಗೊಂಡಿದ್ದರು.. ಈ ಕಾರ್ಯಕ್ರಮವನ್ನು ಶಂಕರ ಪ್ರಸಾದ್ ಅವರು ಸಮನ್ವಯಗೊಳಿಸಿದರು.

2022ರ ಆಗಸ್ಟ್ 14ರಂದು ಭಾನುವಾರ, ಸಂಸ್ಥೆಯ ಸಾಧನೆಗಳಿಗೆ ಆಧಾರವಾಗಿರುವ ಹಾಗೂ ಸಂಸ್ಥೆಗೆ ಸದಾ ಪ್ರೋತ್ಸಾಹ ನೀಡುತ್ತಿರುವ ದಾನಿಗಳನ್ನು ಗೌರವಿಸಲಾಗುತ್ತದೆ. ಒಂದು ಸಾವಿರಕ್ಕೂ ಅಧಿಕ ದಾನಿಗಳು ಆಸ್ಪತ್ರೆಯ ಆವರಣಕ್ಕೆ ಬಂದು 10 ವರ್ಷಗಳ ಸಾಧನೆಯ ಮೈಲುಗಲ್ಲನ್ನು ನೋಡಲಿದ್ದಾರೆ. ದೃಶ್ಯ ಮತ್ತು ಶ್ರವಣದ ಪ್ರಾತ್ಯಕ್ಷಿಕೆ, ಆಸ್ಪತ್ರೆಗೆ ಭೇಟಿ ಹಾಗೂ ದಾನಿಗಳನ್ನು ಗೌರವಿಸುವ ಕಾರ್ಯಕ್ರಮವಿದೆ.

ಮೂರನೇ ದಿನ, ಆಗಸ್ಟ್ 15ರಂದು ಸೋಮವಾರ ಸ್ವಾತಂತ್ರ್ಯದ 75ನೇ ವರ್ಷಾಚರಣೆಯನ್ನು ಮಾಡಲಿದ್ದು, ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ, ಪದ್ಮಶ್ರೀ ಡಾ.ವಿ.ಆರ್.ಗೌರಿಶಂಕರ್ ಅವರು ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ನೀಡಲಾದ ಕ್ಯಾನ್ಸರ್ ಚಿಕಿತ್ಸೆಯಿಂದ ಗುಣಮುಖರಾದ 300ಕ್ಕೂ ಅಧಿಕ ರೋಗಿಗಳಿಗೆ ಅರ್ಪಿತವಾದಂತಹ ಅತ್ಯಂತ ಅಪರೂಪದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಶ್ರೀ ಶಂಕರ ಆಸ್ಪತ್ರೆಯ ವೈದ್ಯರು ನಡೆಸಿಕೊಡಲಿದ್ದಾರೆ. ಕ್ಯಾನ್ಸರ್ ಅನ್ನು ಯಶಸ್ವಿಯಾಗಿ ಎದುರಿಸಿ, ಹೊಸ ಜೀವನ ಕಂಡುಕೊಂಡವರನ್ನು, ವೈದ್ಯರು ಮತ್ತು ಆಸ್ಪತ್ರೆಯ ತಂಡದ ಜತೆಗೆ ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.

Join Whatsapp
Exit mobile version