Home ಟಾಪ್ ಸುದ್ದಿಗಳು ಬಂಜಾರ ಮಹಾಮಠದಲ್ಲಿ ಆರೆಸ್ಸೆಸ್ ಶಿಬಿರ: ಬಂಜಾರ ಸೇವಾ ಸೇನೆ ಆಕ್ರೋಶ

ಬಂಜಾರ ಮಹಾಮಠದಲ್ಲಿ ಆರೆಸ್ಸೆಸ್ ಶಿಬಿರ: ಬಂಜಾರ ಸೇವಾ ಸೇನೆ ಆಕ್ರೋಶ

ದಾವಣಗೆರೆ: ಬಂಜಾರ ಮಹಾಮಠದಲ್ಲಿ ಸೆಪ್ಟೆಂಬರ್‌11ರಿಂದ 19ರವರೆಗೆ ಆರೆಸ್ಸೆಸ್ ಹಮ್ಮಿಕೊಂಡಿರುವ “ಉದ್ಯೋಗಿ ಪ್ರಾಥಮಿಕ ಶಿಕ್ಷಣ ವರ್ಗ” ಕ್ಕೆ ಕರುನಾಡು ಬಂಜಾರ ಸೇವಾ ಸೇನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕರುನಾಡು ಬಂಜಾರ ಸೇವಾ ಸೇನೆಯ ರಾಜ್ಯಾಧ್ಯಕ್ಷ ಲಕ್ಷ್ಮಣ್ ರಾಮಾವತ್ ಈ ಬಗ್ಗೆ ಮಾತನಾಡಿ, ದೇಶದಲ್ಲಿ ಆರೆಸ್ಸೆಸ್ ಕೋಮುವಾದ ಹರಡುತ್ತಿದೆ. ಆರೆಸ್ಸೆಸ್ ನವರು ಹಿಂದಿನಿಂದಲೂ ದಲಿತ, ಬಂಜಾರರ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿದ್ದಾರೆ‌. ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಸೇವಾಲಾಲ್ ಜನ್ಮಸ್ಥಳದಲ್ಲಿ ಆರೆಸ್ಸೆಸ್ ಶಿಬಿರ ಆಯೋಜನೆಗೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದ್ದಾರೆ.

ಆರೆಸ್ಸೆಸ್ ಶಿಬಿರ ನಡೆಯುವಷ್ಟು ದಿನ ನಾವು ಕೂಡ ಸಾವಿರಾರು ಸಂಖ್ಯೆಯಲ್ಲಿ ತೆರಳಿ ಪ್ರತಿಭಟನೆ ನಡೆಸುತ್ತೇವೆ. ನಮ್ಮನ್ನು ಜೈಲಿಗೆ ಹಾಕಿದರೂ ಹೆದರುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

  ಈ ಕಾರ್ಯಕ್ರಮಕ್ಕೆ ಸೂರಗೊಂಡನಕೊಪ್ಪದ ಸೇವಾಲಾಲ್ ಸಮಿತಿಯವರು ಅವಕಾಶ ನೀಡಿಲ್ಲ. ಬಂಜಾರ ಮಹಾಮಠದಲ್ಲಿ ಆರೆಸ್ಸೆಸ್ ಶಿಬಿರ ಆಯೋಜನೆಮಾಡುವುದಕ್ಕೆ ಬಿಡಬಾರದು. ದಲಿತ, ಬಂಜಾರರಿಗೆ ಮೀಸಲಾತಿ ಮತ್ತು ಭಾರತದ ಸಂವಿಧಾನವನ್ನೇ ಒಪ್ಪದಿರುವ ಆರೆಸ್ಸೆಸ್ ಗೆ ಶಿಬಿರ ಏರ್ಪಡಿಸಿರುವುದು ನ್ಯಾಯ ಸಮ್ಮತವಲ್ಲ. ಸಚಿವ ಪ್ರಭು ಚೌವ್ಹಾಣ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಪ್ಲಾನ್ ಮಾಡಿದ್ದಾರೆ. ಸಚಿವ ಸ್ಥಾನ ಪಡೆಯಲು ಬಂಜಾರ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಮಹಾಮಠದಲ್ಲಿ ಯಾವುದೇ ರಾಜಕೀಯ ಸಂಘಟನೆಗಳಿಗೆ ಅವಕಾಶ ಕೊಡುವುದಿಲ್ಲ. ಯಾವ ಪಕ್ಷದ ಸಮ್ಮೇಳನ, ಸಂಘಟನೆಗಳಿಗೆ ಅವಕಾಶ ನೀಡಿಲ್ಲ.‌ 9 ಕೋಟಿ ಬಂಜಾರ ಸಮುದಾಯದ ಜನರಿದ್ದಾರೆ. ಕ್ಷೇತ್ರಕ್ಕೆ ಬರುವ ಮೇಲಾಧಿಕಾರಿಗಳನ್ನು ಕರೆದುಕೊಂಡು ಬಂದು ಹೋರಾಟ ಮಾಡುತ್ತೇವೆ. ಆರ್ ಎಸ್ ಎಸ್ ಶಿಬಿರಕ್ಕೆ ನಮ್ಮ ತೀವ್ರ ವಿರೋಧ ಇದೆ. ಈ ಶಿಬಿರ ನಿಲ್ಲದಿದ್ದರೆ ಸೇವಾಲಾಲ್ ಜನ್ಮಸ್ಥಳದ ಎದುರು ಹೋರಾಟ ಮಾಡುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.

Join Whatsapp
Exit mobile version