ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರವಾಗಿ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ನೀಡಿರುವ ಹೇಳಿಕೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದು, ದೇವೇಗೌಡರಂತಹ ಪಳಗಿದ ರಾಜಕಾರಣಿ ಆಧಾರ ರಹಿತವಾಗಿ ಸುಳ್ಳುಗಳನ್ನು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಕೇರಳ ಮುಖ್ಯಮಂತ್ರಿ ಒಪ್ಪಿದ್ದಾರೆಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ದೇವೇಗೌಡರ ಇತ್ತೀಚಿನ ಹೇಳಿಕೆಯಿಂದ ನನಗೆ ಆಶ್ಚರ್ಯವಾಗಿದೆ. ಜೆಡಿಎಸ್-ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸುವ ಕಲ್ಪನೆಯನ್ನು ಸಹ ನಾನು ಮಾಡುವುದಿಲ್ಲ. ದೇವೇಗೌಡರಂತಹ ಪಳಗಿದ ರಾಜಕಾರಣಿ ಈ ರೀತಿ ಆಧಾರರಹಿತವಾಗಿ ಸುಳ್ಳುಗಳನ್ನು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಿಪಿಐ(ಎಂ) ಎಂದಿಗೂ ಸಂಘ ಪರಿವಾರದ ವಿರುದ್ಧದ ಹೋರಾಟದಲ್ಲಿ ಅಚಲವಾದ ಮತ್ತು ಮಣಿಯದ ಶಕ್ತಿಯಾಗಿದೆ. ನಮ್ಮ ನಿಲುವಿನಲ್ಲಿ ಅಸ್ಪಷ್ಟತೆಗೆ ಅವಕಾಶವಿಲ್ಲ ಎಂದು ಪಿಣರಾಯಿ ವಿಜಯನ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಬಿಜೆಪಿ ಜತೆಗಿನ ಮೈತ್ರಿಗೆ ಜೆಡಿಎಸ್ನ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ಪಕ್ಷದ ರಾಜ್ಯಾಧ್ಯಕ್ಷ ನನ್ನ ಸಮ್ಮತಿ ಇಲ್ಲದೆ ಮೈತ್ರಿ ಸಾಧ್ಯವಿಲ್ಲ. ನಾನು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡ, ಸಿಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆಗೊಳಿಸಿದ್ದರು.
ಸಿಎಂ ಇಬ್ನಂರಾಹಿಂ ಅವರನ್ನು ಉಚ್ಚಾಟಿಸಿದ ಬಳಿಕ ದೇವೇಗೌಡ ಪತ್ರಿಕಾಗೋಷ್ಠಿ ನಡೆಸಿ ಮೈತ್ರಿ ವಿಚಾರವಾಗಿ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದರು. ಇದೇ ವೇಳೆ ಕೇರಳ ಮುಖ್ಯಮಂತ್ರಿಗಳ ಬಗ್ಗೆಯೂ ಪ್ರಸ್ತಾಪಿಸಿದ್ದರು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಕೇರಳ ಮುಖ್ಯಮಂತ್ರಿ ಒಪ್ಪಿದ್ದಾರೆಂದು ಹೇಳಿದ್ದರು.