Home ಟಾಪ್ ಸುದ್ದಿಗಳು ಸಾಮಾಜಿಕ ನ್ಯಾಯದ ಪರವಿರುವ ಪೂರ್ಣಿಮಾ ಮತ್ತು ಶ್ರೀನಿವಾಸ್ ಒಲ್ಲದ ಮನಸ್ಸಿನಿಂದ ಬಿಜೆಪಿ ಯಲ್ಲಿದ್ದರು: ಸಿದ್ದರಾಮಯ್ಯ

ಸಾಮಾಜಿಕ ನ್ಯಾಯದ ಪರವಿರುವ ಪೂರ್ಣಿಮಾ ಮತ್ತು ಶ್ರೀನಿವಾಸ್ ಒಲ್ಲದ ಮನಸ್ಸಿನಿಂದ ಬಿಜೆಪಿ ಯಲ್ಲಿದ್ದರು: ಸಿದ್ದರಾಮಯ್ಯ

ಬೆಂಗಳೂರು: ಪೂರ್ಣಿಮಾ ಮತ್ತು ಶ್ರೀನಿವಾಸ್ ರವರನ್ನು ಸಿಎಂ ಸಿದ್ದರಾಮಯ್ಯ ಹಾಡಿ ಹೊಗಳಿದ್ದಾರೆ. ಇಬ್ಬರು ಸಾಮಾಜಿಕ ನ್ಯಾಯದ ಪರವಾಗಿರುವವರು. ಒಲ್ಲದ ಮನಸ್ಸಿನಿಂದ ಬಿಜೆಪಿಯಲ್ಲಿದ್ದರು ಎಂದಿದ್ದಾರೆ.  ಕಾಂಗ್ರೆಸ್ ಗೆ ಬಂದ ಇವರಿಗೆ ರಾಜಕೀಯವಾಗಿ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಇದೇ ಸಮಯ  ಅಭಯ ನೀಡಿದ್ದಾರೆ.

ಅತ್ಯಂತ ಹಿಂದುಳಿದ ವರ್ಗ ಗೊಲ್ಲ ಸಮುದಾಯದ ಹಿರಿಯ ಕಾಂಗ್ರೆಸ್ ಮುಖಂಡರಾದ ದಿವಂಗತ ಎ.ಕೃಷ್ಣಪ್ಪ ಅವರ ಪುತ್ರಿ ಪೂರ್ಣಿಮಾ ಕೃಷ್ಣಪ್ಪ ಮತ್ತು ಕೃಷ್ಣಪ್ಪ ಅವರ ಅಳಿಯ ಶ್ರೀನಿವಾಸ್, ಕೆ.ನರಸಿಂಹನಾಯಕ್ ಸೇರಿದಂತೆ 750 ಕ್ಕೂ ಹೆಚ್ಚು ಬಿಜೆಪಿಯ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸಿದ್ದರಾಮಯ್ಯ  ಮಾತನಾಡಿದರು.

ನಮ್ಮ ಕಾಂಗ್ರೆಸ್  ಪಕ್ಷ ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳ ಪರವಾಗಿರುವ ಏಕೈಕ ರಾಷ್ಟ್ರೀಯ ಪಕ್ಷ. ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ.  ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಧ್ವನಿಯಾಗಿ ಎ.ಕೃಷ್ಣಪ್ಪ, ಪೂರ್ಣಿಮಾ ಮತ್ತು ಶ್ರೀನಿವಾಸ್ ಮೊದಲಿನಿಂದಲೂ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಜಾತಿ ತಾರತಮ್ಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಸುಳ್ಳೇ ಬಿಜೆಪಿಯ ಮನೆ ದೇವರು. ಎಲ್ಲಾ ಜಾತಿಯ ಬಡವರು ಮತ್ತು ಶೂದ್ರ ಸಮುದಾಯದವರು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ರಾಜಕೀಯ ನಿಲುವು ತೆಗೆದುಕೊಳ್ಳಬೇಕು ಎಂದು ಸಿಎಂ ಕರೆ ನೀಡಿದರು.

ಪೂರ್ಣಿಮಾ, ಶ್ರೀನಿವಾಸ್ ಮತ್ತು ಇವರ ಬೆಂಬಲಿಗರಿಗೆ ಬಿಜೆಪಿ ಯಲ್ಲಿ ಸಾಮಾಜಿಕ ನ್ಯಾಯ ಇಲ್ಲ ಎನ್ನುವುದು ಸ್ಪಷ್ಟವಾಗಿ ಮನದಟ್ಟಾಗಿದೆ. ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ನಿಲುವು ಇಟ್ಟುಕೊಂಡಿರುವವರಿಗೆ ಬಹಳ ಕಷ್ಟ ಎನ್ನುವುದು ಇವರನ್ನು ನೋಡಿದಾಗ ಸ್ಪಷ್ಟವಾಗಿದೆ. ಅದಕ್ಕೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಿಂದುಳಿದ ಸಮುದಾಯಗಳು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.

ಸುಳ್ಳು ಬಿಜೆಪಿಯ ಮನೆ ದೇವರು. ಸುಳ್ಳುಗಳ ಮೂಲಕ ಜನರನ್ನು ಯಾಮಾರಿಸಿ ದಿಕ್ಕು ತಪ್ಪಿಸಿ, ಹಾದಿ ತಪ್ಪಿಸಿ ಕೆಟ್ಟ ರಾಜಕಾರಣ ಮಾಡುತ್ತದೆ. ಅಧಿಕಾರ ಇದ್ದಾಗಲೂ ಸುಳ್ಳು, ಅಧಿಕಾರ ಇಲ್ಲದಿದ್ದಾಗಲೂ ಸುಳ್ಳುಗಳ ಮೇಲೆ ಅವಲಂಬನೆಯಾಗಿರುತ್ತದೆ. ನಿಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ನಿಮ್ಮನ್ನೇ ಯಾಮಾರಿಸುವವರನ್ನು ಈ ಕ್ಷಣದಿಂದಲೇ ತಿರಸ್ಕರಿಸಿ ಎಂದು ಮುಖ್ಯಮಂತ್ರಿಗಳು ಜನತೆಗೆ ಕರೆ ನೀಡಿದರು.

Join Whatsapp
Exit mobile version