ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಸಂಘಪರಿವಾರದ ವಿವಾದಿತ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಆಹ್ವಾನಿಸಿದ್ದನ್ನು ಖಂಡಿಸಿ ಭಾರತೀಯ ಸ್ಟೂಡೆಂಟ್ ಫೆಡರೇಶನ್ (SFI) ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ SFI ಮಾಜಿ ಮುಖಂಡ ಮನೋಜ್ ಕುಮಾರ್ ವಾಮಂಜೂರು ಮಾತನಾಡಿ, ವಿಶ್ವ ವಿದ್ಯಾಲಯದ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಕೋಮು ಪ್ರಚೋದನಕಾರಿ ಹೇಳಿಕೆ ನೀಡುವ RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಆಹ್ವಾನಿಸಿದ್ದು ಖಂಡನೀಯ. ವಿವಿ ಕಾಲೇಜು ವಿವಿಧ ಕಡೆಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಅಂತಹ ಸಂಸ್ಥೆಯ ವಿದ್ಯಾರ್ಥಿ ಪರಿಷತ್ ನ ಕಾರ್ಯಕ್ರಮದಲ್ಲಿ ಭಾಗವಹಿಸುವ ವ್ಯಕ್ತಿಗೆ ಕನಿಷ್ಟ ಅರ್ಹತೆಯಾದರೂ ಇರಬೇಕು. ಆದರೆ ಆ ಅರ್ಹತೆಗಳಾವುದೂ ಪ್ರಭಾಕರ ಭಟ್ಟರಲ್ಲಿ ಇಲ್ಲ. ಅಂಬೇಡ್ಕರ್ ಸಂವಿಧಾನ ವಿರೋಧಿಸುವವರು ವಿವಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನರ್ಹರು ಎಂದರು. ಅಲ್ಲದೇ, ಜಿಲ್ಲೆಯ ಯುವಜನರು ಬ್ರಾಹ್ಮಣಶಾಹಿತ್ವಕ್ಕೆ ಒಳಗಾಗುತ್ತಿರುವುದು ವಿಷಾದನೀಯ. RSS ನಲ್ಲಿ ಚೆಡ್ಡಿ ಹಾಕಿ ಹಾಕಿ ಪಥ ಸಂಚಲನ ಮಾಡುವ ಅದೆಷ್ಟೋ ಯುವಕರಿಗೆ ಉದ್ಯೋಗವಿಲ್ಲದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ SFI ಮಾಜಿ ಜಿಲ್ಲಾಧ್ಯಕ್ಷೆ ಮಾಧುರಿ ಬೋಳಾರ, ಸಂಚಾಲಕ ವಿನೀತ್ ದೇವಾಡಿಗ, ಸಹಸಂಚಾಲಕ ವಿನೂಷ ರಮಣ, ಜಿಲ್ಲಾ ಮುಖಂಡರಾದ ಬಾಶಿತ್, ಪೃಥ್ವಿರಾಜ್, ಸಿನಾನ್, ಹನುಮಂತ, ಜೀವನ್, ಜೀತೇಶ್ ಮತ್ತಿತ್ತರರು ಉಪಸ್ಥಿತರಿದ್ದರು.