ಮಂಗಳೂರು: ಮಂಗಳೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಭರತ್ ಭಾಸ್ಕರ ಎಂಬಾತ ಕಾಲೇಜು ಸಮಸ್ಯೆಗಳಿಂದ ಮನನೊಂದು ಆತ್ಮಹತ್ಯೆ ನಡೆಸಿದ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಲು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಭಾರತ ವಿದ್ಯಾರ್ಥಿ ಫೆಡರೇಶನ್ (SFI) ದ.ಕ ಜಿಲ್ಲಾ ಸಮಿತಿ ಮನವಿ ಸಲ್ಲಿಸಿತು.
ಶಿಕ್ಷಣ ಕೇಂದ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊರ ರಾಜ್ಯಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಆಗಮಿಸುತ್ತಾರೆ. ಆದರೆ ಇಲ್ಲಿನ ಬಹುತೇಕ ಶಿಕ್ಷಣ ಸಂಸ್ಥೆಗಳು ಮೂಲಭೂತ ವ್ಯವಸ್ಥೆಗಳಿಲ್ಲದೆ ನಿಯಮಗಳನ್ನು ಗಾಳಿಗೆ ತೂರಿ ಪರವಾನಿಗೆ ಪಡೆದಿದೆ. ಶುಲ್ಕದ ಹೆಸರಲ್ಲಿ ಸುಲಿಗೆ ಮಾಡಲಾಗುತ್ತಿದೆ. ಸೂಕ್ತ ಶಿಕ್ಷಕರನ್ನು ನೇಮಿಸಲಾಗುತ್ತಿಲ್ಲ, ವಿದ್ಯಾರ್ಥಿಗಳನ್ನು ಸಮಸ್ಯೆಗೆ ದೂಡಲಾಗುತ್ತಿದ್ದು ಅವರ ಭವಿಷ್ಯಕ್ಕೆ ತೊಡಕು ಮಾಡಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿ ಭರತ್ ಭಾಸ್ಕರ ಎಂಬಾತನ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದೆ.
ನಿಯೋಗದಲ್ಲಿ SFI ನ ಜಿಲ್ಲಾ ಮುಖಂಡರಾದ ವಿನೀತ್ ದೇವಾಡಿಗ, ವಿನುಶ ರಮಣ, ನಿಶಾಂತ್ ಮತ್ತು ಮನೋಜ್ ವಾಮಂಜೂರ್ ಉಪಸ್ಥಿತರಿದ್ದರು.