Home Uncategorized ಮಂಗಳೂರು | ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ವಕೀಲ ಕೆ . ಎಸ್.ಎನ್. ರಾಜೇಶ್...

ಮಂಗಳೂರು | ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ವಕೀಲ ಕೆ . ಎಸ್.ಎನ್. ರಾಜೇಶ್ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಇಂಟರ್ನ್‌ಶಿಪ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಮಂಗಳೂರಿನ ಖ್ಯಾತ ವಕೀಲ ಕೆ.ಎಸ್.ಎನ್. ರಾಜೇಶ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ ಐ ಆರ್ ದಾಖಲಾಗಿದೆ.

ನಗರದ ಕಾನೂನು ಕಾಲೇಜೊಂದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು, ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ವಕೀಲರ ವಿರುದ್ಧ ನಿನ್ನೆ ರಾತ್ರಿ ನೀಡಿದ ದೂರಿನ ಮೇರೆಗೆ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ವಕೀಲ ರಾಜೇಶ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಎಲ್‌ ಎಲ್‌ ಬಿ ವಿದ್ಯಾರ್ಥಿನಿ ಇಂಟರ್ನ್‌ ಶಿಪ್‌ ಗೆ  ರಾಜೇಶ್ ಬಳಿ‌‌ ಬರುತ್ತಿದ್ದರು. ರಾಜೇಶ್ ಅವರು ಎಸಿಬಿ, ಲೋಕಾಯುಕ್ತಕ್ಕೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ನಗರದ ಪ್ರಸಿದ್ಧ ಬ್ಯಾಂಕ್‌ ಗಳು ಸೇರಿ ಹಲವು ಕಂಪನಿಗಳಿಗೆ ಲೀಗಲ್ ಅಡ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 ಇನ್ನು ಸಂತ್ರಸ್ತೆ ಹಾಗೂ ವಕೀಲರ ನಡುವೆ ನಡೆದ ಫೋನ್ ಸಂಭಾಷಣೆಯೆಂದು ಹೇಳಲಾದ 11 ನಿಮಿಷ 55 ಸೆಕೆಂಡ್ಸ್ ಇರುವ ಆಡಿಯೋ ಒಂದು ವೈರಲ್ ಆಗಿದೆ.

ವಕೀಲ ರಾಜೇಶ್ ವಿರುದ್ಧ  ಐಪಿಸಿ ಸೆಕ್ಷನ್ 354 ( A ) , 354 ( B ) , 354 ( C ) , 376 , 511 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ವಿವರ ನೀಡಿರುವ ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಒಟ್ಟು ಎರಡು ಪ್ರಕರಣಗಳು ದಾಖಲಾಗಿವೆ. ಇಂಟರ್ನ್ ಶಿಪ್ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಒಂದು ಎಫ್ ಐಆರ್ ದಾಖಲಾಗಿದೆ. ಅದೆ ರೀತಿ ಸಂತ್ರಸ್ತೆಯ ಸ್ನೇಹಿತೆ ಹಾಗೂ ಆಕೆಯ ಸಹೋದರಿಗೆ ಕಾನೂನು ನೆರವು ನೀಡುವುದಾಗಿ ಹೇಳಿ ಮೈದಾನಕ್ಕೆ ಕರೆದೊಯ್ದು ನಾನು ಹೇಳಿದಂತೆ ಹೇಳಿಕೆ ನೀಡಬೇಕು ಎಂದು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧ ಮತ್ತೊಂದು ಎಫ್ ಐಆರ್ ದಾಖಲಾಗಿದೆ. ಇದು ಗಂಭೀರ ಪ್ರಕರಣವಾಗಿರುವುದರಿಂದ ಎಸಿಪಿ ರಂಜಿತ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಆರೋಪಿಯ ಹೇಳಿಕೆ ಪಡೆಯಲು ಅವರನ್ನು ಬಂಧಿಸಬೇಕಾಗಿದೆ ಎಂದು ತಿಳಿಸಿದರು.

ಈ ಬಗ್ಗೆ ವೀಡಿಯೋ ಮೂಲಕ ಸ್ಪಷ್ಟೀಕರಣ ನೀಡಿರುವ ವಕೀಲ ರಾಜೇಶ್ , ಇದು ನನ್ನ ವಿರುದ್ಧ ನಡೆದ ಷಡ್ಯಂತ್ರ. ಇಂತಹ ಯಾವುದೇ ತಪ್ಪನ್ನು ನಾನು ಮಾಡಿಲ್ಲ. ಹಾಗಾಗಿ ದೃತಿಗೆಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

ಸೆ. 25ರಂದು ಈ ಘಟನೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಸೆ. 27ರಂದು ನಾನು ಕದ್ರಿ ಪೊಲೀಸ್ ಠಾಣೆಗೆ ತೆರಳಿ, ಇಬ್ಬರು ಹುಡುಗಿಯರು ಸೇರಿಕೊಂಡು ಹಣಕ್ಕಾಗಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಎಂದು ದೂರು ನೀಡಿದ್ದೆ. ಆದರೆ ಈ ಬಗ್ಗೆ ಪೊಲೀಸರು ತನಿಖೆಯನ್ನೇ ಮಾಡಿಲ್ಲ ಎಂದು ತಿಳಿಸಿದ್ದಾರೆ.

 ಇದಾದ ಬಳಿಕವೂ ಯುವತಿ ನನ್ನ ಕಚೇರಿಗೆ ಒಬ್ಬರೇ ಎರಡು ಮೂರು ಬಾರಿ ಬಂದು ಮಾತನಾಡಿದ್ದಾರೆ. ಆಪಾದನೆ ಸುಳ್ಳು ಎಂಬುದು ಇದರಿಂದ ಗೊತ್ತಾಗುತ್ತಿದೆ. ನಾನು ಬಾರ್ ಅಸೋಸಿಯೇಷನ್ ಗೆ ದೂರನ್ನಾಗಲಿ, ಸಿಡಿಯನ್ನಾಗಲೀ ಕೊಟ್ಟಿಲ್ಲ ಎಂದು ಯುವತಿಯೇ ಬರೆದು ಟೈಪ್ ಮಾಡಿಸಿ ಸಹಿ ಹೆಬ್ಬೆಟ್ಟು ಹಾಕಿ ಕೊಟ್ಟಿದ್ದಾರೆ ಎಂದು ವಕೀಲ ತಿಳಿಸಿದ್ದಾರೆ.

ಈ ಷಡ್ಯಂತರದ ಹಿಂದೆ ಹಲವು ಜನರಿದ್ದಾರೆ. ಇದರ ವಿರುದ್ಧ ತನಿಖೆ ನಡೆಯಲಿ. ಇದು ಸಂತ್ರಸ್ತೆ ಎಂಬ ವಿಕ್ಟಿಮ್ ಕಾರ್ಡ್ ಬಳಸಿ ಹಣಕ್ಕಾಗಿ ಮಾಡಿರುವ ಸುಳ್ಳು ಆರೋಪವಾಗಿದೆ. ನನ್ನ ಏಳಿಗೆ ಸಹಿಸದವರು, ಹಣಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ರಾಜೇಶ್ ಆರೋಪಿಸಿದ್ದಾರೆ.  

Join Whatsapp
Exit mobile version