ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಇಂದು ಏಳು ತಿಂಗಳು ಪೂರ್ಣಗೊಂಡು, ಎಂಟನೇ ತಿಂಗಳಿಗೆ ಕಾಲಿಟ್ಟಿದೆ. ಆ ಪ್ರಯುಕ್ತ ದೆಹಲಿಯತ್ತ ಸಾವಿರಾರು ರೈತರು ಪ್ರತಿಭಟನೆಗಾಗಿ ಆಗಮಿಸಿದ್ದಾರೆ.
ರೈತರು ದೆಹಲಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ರೈಲಿನ ಕೆಲವು ನಿಲ್ದಾಣಗಳಲ್ಲಿ ಪ್ರಯಾಣ ನಿಯಂತ್ರಿಸಲಾಗಿದೆ. ಹಳದಿ ಲೈನ್ ನಲ್ಲಿ ವಿಶ್ವವಿದ್ಯಾಲಯ, ಸಿವಿಲ್ ಲೈನ್ಸ್, ವಿಧಾನಸಭಾ ನಿಲ್ದಾಣಗಳು ಮುಚ್ಚಲಿವೆ ಎಂದು ಪೊಲೀಸರು ಸೂಚನೆ ನೀಡಿದ್ದಾರೆ.
ರೈತರ ಪ್ರತಿಭಟನೆಗೆ ಏಳು ತಿಂಗಳು ಪೂರ್ಣಗೊಳ್ಳುವುದರಿಂದ, ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ರಾಜ್ಯಪಾಲರಿಗೆ ಮತ್ತು ರಾಷ್ಟ್ರಪತಿಗಳಿಗೆ ಈ ಸಂಬಂಧ ಮನವಿ ಸಲ್ಲಿಸುವಂತೆ ರೈತರಿಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಅಲ್ಲದೆ, ʼಕೃಷಿ ಉಳಿಸಿ, ಪ್ರಜಾತಂತ್ರ ಉಳಿಸಿʼ ಎಂಬ ಘೋಷಣೆಯಡಿ ಪ್ರತಿಭಟನೆಗೂ ಕರೆ ನೀಡಿದೆ.
ಕಳೆದ ಏಳು ತಿಂಗಳುಗಳಿಂದ ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ದೇಶದ ರೈತ ಸಂಘಗಳು ಜಗತ್ತಿನ ಅತಿ ದೀರ್ಘಾವಧಿ, ಅತಿದೊಡ್ಡ ಪ್ರತಿಭನೆಯಲ್ಲಿ ಭಾಗಿಯಾಗಿವೆ. ಸಾವಿರಾರು ಜನರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಈ ಪ್ರತಿಭಟನೆ ತೀವ್ರಗೊಳಿಸಲಿದ್ದೇವೆ ಎಂದು ಭಾರತೀಯ ಕಿಸಾನ್ ಮೋರ್ಚಾದ ಡಾ. ದರ್ಶನ್ ಪಾಲ್ ಹೇಳಿದ್ದಾರೆ.
ಉತ್ತರ ಪ್ರದೇಶದ ಸಹರಾನ್ ಪುರ, ಸಿಸೌಲಿಯಿಂದ ಸಾವಿರಾರು ರೈತರು ಬಿಕೆಯು ಮುಖ್ಯಸ್ಥ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಗಾಝಿಪುರ ತಲುಪಿದ್ದಾರೆ. ರೈತರು ಟ್ರಾಕ್ಟರ್ ಮತ್ತಿತರ ವಾಹನಗಳಲ್ಲಿ ಗಾಝಿಪುರಕ್ಕೆ ಆಗಮಿಸಿದ್ದಾರೆ.