Home ಕರಾವಳಿ ಮಂಗಳೂರು ಕಮಿಷನರೇಟ್, ಎಸ್ಪಿ ವ್ಯಾಪ್ತಿಯ 354 ಕೆಜಿ ಮಾದಕ ವಸ್ತು ನಾಶ

ಮಂಗಳೂರು ಕಮಿಷನರೇಟ್, ಎಸ್ಪಿ ವ್ಯಾಪ್ತಿಯ 354 ಕೆಜಿ ಮಾದಕ ವಸ್ತು ನಾಶ

ಮಂಗಳೂರು: ಮಂಗಳೂರು ಕಮಿಷನರೇಟ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ೩೫೪ ಕೆಜಿ ಮಾದಕ ದ್ರವ್ಯ ವಸ್ತುಗಳನ್ನು ಮುಲ್ಕಿ ಕೊಲನಾಡ್ ಜಂಕ್ಷನ್ ಸಮೀಪದ ಬಯೋ ಮೆಡಿಕಲ್ ವೇಸ್ಟ್ ಟ್ರೀಟ್‌ಮೆಂಟ್ ರೂಮ್‌ನಲ್ಲಿ ಶನಿವಾರ ನಾಶಪಡಿಸಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಮಾದಕ ವಸ್ತು ವಿರೋಧಿ ದಿನದ ಪ್ರಯುಕ್ತ ನಡೆಸಿದ ಕಾರ್ಯಾಚರಣೆ ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು ಎಂದು ತಿಳಿಸಿದರು.

೫೦ ಪ್ರಕರಣಗಲ್ಲಿ ೧೩೦ಕ್ಕೂ ಹೆಚ್ಚು ಕೆ.ಜಿ. ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದರಲ್ಲಿ ಗಾಂಜಾ ಪ್ರಮಾಣವೇ ಅಧಿಕವಿದೆ. ಇದರಲ್ಲಿ ಎಲ್‌ಎಸ್‌ಡಿ, ಎಂಡಿಎಂಎ, ಕೊಕೈನ್, ಬ್ರೌನ್ ಶುಗರ್ ಒಳಗೊಂಡಿದೆ ಎಂದರು.

ಮಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿದೆ. ಮಾದಕ ದ್ರವ್ಯ ಜಾಲವು ಯುವ ಜನಾಂಗವನ್ನೇ ಗುರಿಯಾಗಿಸಿಕೊಂಡಿದೆ. ಯುವಶಕ್ತಿಯನ್ನು ಉಳಿಸುವುದು ಎಲ್ಲರ ಜವಾಬ್ದಾರಿ. ಮಾದಕ ದ್ರವ್ಯ ಮಾರಾಟ, ಸೇವನೆ ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ. ಈ ಸಂದರ್ಭ ಮಾಹಿತಿ ನೀಡುವವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದೂ ಆಯುಕ್ತರು ಹೇಳಿದರು.

ದ.ಕ. ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನವಣೆ ಮಾತನಾಡಿ, ಎಸ್ಪಿ ವ್ಯಾಪ್ತಿಯಲ್ಲಿ ೨೨೪ ಕೆ.ಜಿ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ೨೧೪ ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿ ಭಾಸ್ಕರ್ ವಿ.ಬಿ., ಬಂಟ್ವಾಳ ಡಿವೈಎಸ್ಪಿ ವ್ಯಾಲಂಟೈನ್ ಡಿಸೋಜ, ಡಿಸಿಆರ್‌ಬಿ ಡಿವೈಎಸ್ಪಿ ದಿನಕರ ಶೆಟ್ಟಿ, ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ.‌ಕುಮಾರ್, ಬಯೋ ಮೆಡಿಕಲ್ ವೇಸ್ಟ್ ಟ್ರೀಟ್‌ಮೆಂಟ್ ರೂಮ್‌ನ ಇನ್‌ಚಾರ್ಜ್ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು

Join Whatsapp
Exit mobile version