Home ಟಾಪ್ ಸುದ್ದಿಗಳು ಚೆನ್ನೈನಲ್ಲಿ ಕ್ಯಾನ್ಸರ್ ಮಕ್ಕಳಿಗೆ ಪ್ರತ್ಯೇಕ ಸಮನ್ವಯ ಕೇಂದ್ರ ಸ್ಥಾಪನೆ

ಚೆನ್ನೈನಲ್ಲಿ ಕ್ಯಾನ್ಸರ್ ಮಕ್ಕಳಿಗೆ ಪ್ರತ್ಯೇಕ ಸಮನ್ವಯ ಕೇಂದ್ರ ಸ್ಥಾಪನೆ

ಚೆನ್ನೈ:ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ರಾಷ್ಟ್ರೀಯ ಸೊಸೈಟಿ ಮತ್ತು ಕ್ಯಾನ್ ಕಿಡ್ಸ್ ಕಿಡ್ಸ್ ಕ್ಯಾನ್ ಸಂಸ್ಥೆಯವರು ಚೆನ್ನೈನಲ್ಲಿ ರಾಜ್ಯ ಕಾಳಜಿ ಸಮನ್ವಯ ಕೇಂದ್ರವೊಂದನ್ನು ಆರಂಭಿಸಿದ್ದಾರೆ.

ಎಚ್ ಡಿಎಫ್ ಸಿ ಲೈಫ್, ಡೇಟಾ ಪ್ಯಾಟರ್ನ್ಸ್, ಅಕ್ಸೆಸ್ ಹೆಲ್ತ್ ಕೇರ್, ಸಿಎಸ್ ಆರ್ ಪಾಲುದಾರಿಕೆಯಲ್ಲಿ ಈ ಸಮನ್ವಯ ಕೇಂದ್ರ ಆರಂಭವಾಗಿದೆ. ಇದು ಹಲವು ಮಕ್ಕಳ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಹುಡುಕಲಿದೆ. ಮನೆಯಾಚೆಯ ಮನೆ ಎಂದು ಇದನ್ನು ಕರೆಯಲಾಗಿದೆ.

ತಮಿಳುನಾಡಿನ ಆರೋಗ್ಯ ಮಂತ್ರಿ ಮ. ಸುಬ್ರಮಣಿಯನ್ ಈ ಕೇಂದ್ರವನ್ನು ಉದ್ಘಾಟನೆ ಮಾಡಿದರು. ಆಗ ಮಾತನಾಡಿದ ಅವರು “ಮಕ್ಕಳು ಕ್ಯಾನ್ಸರಿಗೆ ಒಳಗಾಗುವುದು ಮತ್ತು ಅದರಿಂದ ಬಚಾವಾಗುವುದು ತುಂಬ ಕಷ್ಟದ ಕೆಲಸ. ಅವರಿಗಾಗಿ ಇದು ಅತ್ಯುತ್ತಮ ಸೇವೆಯಾಗಿದೆ” ಎಂದರು. ಎನ್ ಜಿಓ- ಸರಕಾರೇತರ ಸಂಸ್ಥೆಯ ಈ ಸ್ತುತ್ಯ ಕಾರ್ಯವನ್ನು ಅವರು ಹೊಗಳಿದರು.

ಸಮನ್ವಯ ಕೇಂದ್ರವು 24 ಕುಟುಂಬಗಳಿಗೆ ಸ್ಥಳಾವಕಾಶ ಒದಗಿಸಲಿದ್ದು ಬಾಧಿತರು ಹೋಗಿ ಬರಲು ಸಾರಿಗೆ ವ್ಯವಸ್ಥೆ, ಮಾನಸಿಕ ಮತ್ತು ಪೌಷ್ಟಿಕ ಆಹಾರದ ಆಪ್ತ ಸಮಾಲೋಚನೆ, ಪೌಷ್ಟಿಕ ಆಹಾರದ ನೆರವು, ಶಿಕ್ಷಣಕ್ಕೆ ಬೆಂಬಲ, ದೈಹಿಕ ಆಯಾಮ ಚಿಕಿತ್ಸೆ ಮೊದಲಾದವನ್ನೆಲ್ಲ ಒದಗಿಸಲಿದೆ.

ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿ 3,686 ಕ್ಯಾನ್ಸರ್ ಪತ್ತೆಯಾದ ಮಕ್ಕಳು ಕಂಡು ಬಂದಿದ್ದಾರೆ. ವರ್ಷದಲ್ಲಿ 60%ದಷ್ಟು ಮಂದಿ ಬಾಧಿತರು ಮಾತ್ರ ಆಸ್ಪತ್ರೆಗಳತ್ತ ಬರುತ್ತಾರೆ.

ರಾಜ್ಯದಲ್ಲಿ ಕ್ಯಾನ್ ಕಿಡ್ 16 ಮಕ್ಕಳ ಕ್ಯಾನ್ಸರ್ ಚಿಕಿತ್ಸೆಯ ಆಸ್ಪತ್ರೆಗಳನ್ನು ಹೊಂದಿದೆ.

ಕ್ಯಾನ್ ಕಿಡ್ಸ್ ಕಿಡ್ಸ್ ಕ್ಯಾನ್ ಸಂಸ್ಥೆಯ ಜೊತೆಗೆ ತಮಿಳುನಾಡು ಆರೋಗ್ಯ ಇಲಾಖೆಯು ಪರಸ್ಪರ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದೆ. ರಾಜ್ಯದಲ್ಲಿ ಮಕ್ಕಳ ಕ್ಯಾನ್ಸರನ್ನು ತೊಡೆದು ಹಾಕಲು ಕೂಡಿ ದುಡಿಯುವುದು ಆ ಒಪ್ಪಂದದ ಮುಖ್ಯಾಂಶವಾಗಿದೆ.

ಕ್ಯಾನ್ ಕಿಡ್ಸ್ ಕಿಡ್ಸ್ ಕ್ಯಾನ್ ಸಂಸ್ಥೆಯ ಚೇರ್ಮನ್ ಪೂನಂ ಬಗಾಯ್ ಮಾತನಾಡಿ “ಸೆಪ್ಟೆಂಬರ್ ತಿಂಗಳು ಮಕ್ಕಳ ಕ್ಯಾನ್ಸರ್ ಅರಿವು ಮಾಸ. ನಾವು ಕ್ಯಾನ್ಸರ್ ಪೀಡಿತ ಮಕ್ಕಳನ್ನು ಗೌರವಿಸಬೇಕಾದ ತಿಂಗಳು. ರಾಜ್ಯದ ಆರೋಗ್ಯ ಸಚಿವರಿಂದ ಉದ್ಘಾಟನೆ ಕಂಡ ಈ ಕೇಂದ್ರವು ಸಕಲ ಸಹಭಾಗಿತ್ವದೊಂದಿಗೆ ತಮಿಳುನಾಡು ಮಾತ್ರವಲ್ಲ, ಇಡೀ ದಕ್ಷಿಣ ಭಾರತದಲ್ಲಿಯೇ ಮಕ್ಕಳ ಕ್ಯಾನ್ಸರ್ ಇಲ್ಲದಂತೆ ಮಾಡಲು ದುಡಿಯುತ್ತದೆ” ಎಂದು ಹೇಳಿದರು.

Join Whatsapp
Exit mobile version