Home ಟಾಪ್ ಸುದ್ದಿಗಳು ಟಿಪ್ಪು ಹೆಸರಿನಲ್ಲಿ ವಿಶ್ವ ವಿದ್ಯಾಲಯ ಸ್ಥಾಪಿಸಿ: ಅಪ್ಸರ್ ಕೊಡ್ಲಿಪೇಟೆ

ಟಿಪ್ಪು ಹೆಸರಿನಲ್ಲಿ ವಿಶ್ವ ವಿದ್ಯಾಲಯ ಸ್ಥಾಪಿಸಿ: ಅಪ್ಸರ್ ಕೊಡ್ಲಿಪೇಟೆ

ಪಾದರಾಯನಪುರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಪ್ರತಿನಿಧಿ ಸಭೆಯು ಶಾಹಿದ್ ಫಂಕ್ಷನ್ ಹಾಲ್, ಪಾದರಾಯನಪುರದಲ್ಲಿ ಜರುಗಿತು.

ಜಿಲ್ಲೆಯಿಂದ ರಾಜ್ಯ ಪ್ರತಿನಿಧಿ ಸಭೆಯಲ್ಲಿ ಭಾಗವಹಿಸಲು ಕೌನ್ಸಿಲರ್ ಆಯ್ಕೆ ಪ್ರಕ್ರಿಯೆಯನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಚುನಾವಣಾಧಿಕಾರಿ ಅಪ್ಸರ್ ಕೊಡ್ಲಿಪೇಟೆ ರವರು ನಡೆಸಿಕೊಟ್ಟರು.

ಜಿಲ್ಲಾ ಸಮಿತಿಯಿಂದ ರಾಜ್ಯ ಪ್ರತಿನಿಧಿ ಸಭೆಗೆ ಒಬ್ಬ ಕೌನ್ಸಿಲರ್ ಆಯ್ಕೆ ಪ್ರಕ್ರಿಯೆಯನ್ನು ಚುನಾವಣೆಯ ಮೂಲಕ ನಡೆಸಲಾಯಿತು.

ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಟಿಪ್ಪು ಧ್ವಜಾರೋಹಣ ನೆರವೇರಿಸಿ ಉದ್ಘಾಟನಾ ಭಾಷಣ ಮಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಲಕ್ಷಾಂತರ ಕೋಟ್ಯಾಂತರ ಅಭಿಮಾನಿಗಳ ಮನಸ್ಸುಗಳಲ್ಲಿ ಇನ್ನೂ ಜೀವಂತವಾಗಿದ್ದಾರೆ.

ಸರ್ಕಾರಕ್ಕೆ ಟಿಪ್ಪು ಜಯಂತಿ ಆಚರಣೆ ಮಾಡುವ ಧೈರ್ಯ ಇಲ್ಲದಿದ್ದರೇ ಪರವಾಗಿಲ್ಲ, ಅವರ ಅಭಿಮಾನಿಗಳು ಆ ಕೆಲಸವನ್ನು ಕಳೆದ 275 ವರ್ಷಗಳಿಂದ ಮಾಡುತ್ತಾ ಬರುತಿದ್ದಾರೆ.

40 ಸಾವಿರ ಚದರ ಮೈಲಿಯಿದ್ದ ಮೈಸೂರು ಸಾಮ್ರಾಜ್ಯವನ್ನು 80 ಸಾವಿರ ಚದರ ಮೈಲಿಗೆ ವಿಸ್ತರಿಸಿದ್ದು ಮಾತ್ರವಲ್ಲ, ಈಗಿನ ಕನ್ನಂಬಾಡಿ ಆಣೆಕಟ್ಟಿನ ನೀಲನಕ್ಷೆಯನ್ನು ಸಿದ್ಧಪಡಿಸಿದ್ದು ಟಿಪ್ಪು ಸುಲ್ತಾನ್.

ಈ ನಾಡಿಗೆ ರೇಷ್ಮೆಯನ್ನು ತಂದು ಲಕ್ಷಾಂತರ ರೈತರ ಬದುಕಿಗೆ ಬೆಳಕು ನೀಡಿದವನು ಟಿಪ್ಪು ಸುಲ್ತಾನ್. ಮರಾಠರು ಶೃಂಗೇರಿ ಶಾರದಾಪೀಠವನ್ನು ಧ್ವಂಸಗೊಳಿಸಿ, ಅದನ್ನು ಲೂಟಿ ಮಾಡಿಕೊಂಡು ಹೋದಾಗ, ಅದಕ್ಕಾಗಿ ಶೃಂಗೇರಿ ಸ್ವಾಮಿಗಳ ಕ್ಷಮೆ ಕೇಳಿ, ಲೂಟಿ ಮಾಡಿಕೊಂಡ ಆಭರಣಗಳನ್ನು ಮತ್ತೆ ಮಾಡಿಸಿಕೊಟ್ಟು ಮಠವನ್ನು ಜೀರ್ಣೋದ್ಧಾರ ಮಾಡಿದ್ದು ಟಿಪ್ಪು ಸುಲ್ತಾನ್. ಹೀಗೆ ಹಿಂದೂ ದೇವಾಲಯಗಳಿಗೆ ನೆರವು ನೀಡಿದ ನೂರಾರು ಉದಾಹರಣೆಗಳನ್ನು ಕೊಡಬಹುದು.

ಯುದ್ಧದಲ್ಲಿ ಶತ್ರುದೇಶಗಳ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ ಕಾರಣಕ್ಕಾಗಿ ತನ್ನದೇ ತಂದೆಯ ಸೇನಾ ದಳದ ಮುಖ್ಯಸ್ಥ ಮಖ್ಬುಲ್ ಅಹಮದ್ ನನ್ನು ಶಿಕ್ಷೆಗೆ ಗುರಿಪಡಿಸಿದ ಟಿಪ್ಪು ಸುಲ್ತಾನ್. ಯಾರು ಭೂಮಿ ಉಳುತ್ತಾರೋ, ಅವರು ಯಾವ ಜಾತಿಯವರೇ ಆಗಿದ್ದರೂ ಅವರಿಗೆ ಭೂಮಿ ಒಡೆತನ ನೀಡಬೇಕೆಂದು ಘೋಷಣೆ ಮಾಡಿ, ದೇವಸ್ಥಾನ ಮತ್ತು ಮಠಗಳ ವಶದಲ್ಲಿದ್ದ ನೂರಾರು ಎಕರೆ ಭೂಮಿಯನ್ನು ಅಲ್ಲಿ ಉಳುಮೆ ಮಾಡುವ ಶೂದ್ರರಿಗೆ ಹಂಚಿದ್ದು ಟಿಪ್ಪು ಸುಲ್ತಾನ್.

ಟಿಪ್ಪು ಸುಲ್ತಾನ್ ರವರ ನೈಜ ಇತಿಹಾಸ ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿಶ್ವ ವಿದ್ಯಾಲಯ ಸ್ಥಾಪಿಸಲು ಸರ್ಕಾರವನ್ನು ಆಗ್ರಹಿಸಿದರು.

ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಹಾಗೂ ಹೈಕೋರ್ಟ್ ವಕೀಲರಾಗಿರುವ ಅಡ್ವೋಕೇಟ್ ಮಜೀದ್ ಖಾನ್ ರವರು BNS, BNSS, BSA ಮೂರು ಹೊಸ ಕಾನೂನುಗಳ ಬಗ್ಗೆ ಅಗತ್ಯ ಕಾನೂನು ತರಗತಿ ನೀಡಿದರು.

ಜಿಲ್ಲಾಧ್ಯಕ್ಷರಾದ ಸೈಯದ್ ಮಹಬೂಬ್ ಪ್ರಾಸ್ತಾವಿಕ ಭಾಷಣ ಮಾಡಿದರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಅಹ್ಮದ್ ಅವರು ಸ್ವಾಗತ ಭಾಷಣ ಮಾಡಿದರು

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾಜಾ ಮೊಯಿನುದ್ದೀನ್, ಜಿಲ್ಲಾ ಖಜಾಂಜಿ ಅಯೂಬ್, ಕಾರ್ಯದರ್ಶಿ ತಬ್ರೇಝ್, ಸೇರಿದಂತೆ ವಿವಿಧ ವಾರ್ಡ್ ನಾಯಕರುಗಳು ಭಾಗವಹಿಸಿದ್ದರು.

Join Whatsapp
Exit mobile version