Home ಟಾಪ್ ಸುದ್ದಿಗಳು ಪೌರಕಾರ್ಮಿಕರ ಅರೆ ಬೆತ್ತಲೆ ಪ್ರತಿಭಟನೆ; ಸಂಬಳ ಕೊಡಿಸುವ ಭರವಸೆ ನೀಡಿದ ಶಾಸಕ

ಪೌರಕಾರ್ಮಿಕರ ಅರೆ ಬೆತ್ತಲೆ ಪ್ರತಿಭಟನೆ; ಸಂಬಳ ಕೊಡಿಸುವ ಭರವಸೆ ನೀಡಿದ ಶಾಸಕ

ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನವೂ ಮುಂದುವರಿಯಿತು.

ಸ್ವಚ್ಛತೆ ಸೇರಿದಂತೆ ಎಲ್ಲಾ ರೀತಿಯ ಕೆಲಸವನ್ನು ಬಹಿಷ್ಕರಿಸಿ ಜು.1 ರಿಂದ ಎಲ್ಲಾ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಇಂದು ಡಿಸಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ನೂರಾರು ಕಾರ್ಮಿಕರು, ಖಾಯಂ ಕೆಲಸ  ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸ್ಥಳಕ್ಕಾಗಮಿಸಿದ ಶಾಸಕ ಪ್ರೀತಂಗೌಡ ಹಾಗೂ ನಗರಸಭೆ ಅಧ್ಯಕ್ಷ ಆರ್.ಮೋಹನ್ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ತಮ್ಮ ಬೇಡಿಕೆ ಈಡೇರಿಸುವವರೆಗೂ ಧರಣಿ ಕೈಬಿಡುವುದಿಲ್ಲ. ನಿಗದಿತ ಸಮಯಕ್ಕೆ ಸಂಬಳ ಕೊಡುವ ಬಗ್ಗೆ ಲಿಖಿತ ಭರವಸೆ ನೀಡಬೇಕು. ಗುತ್ತಿಗೆ ರದ್ದು ಪಡಿಸಿ ನೇರ ಪಾವತಿ ಮಾಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಈ ವೇಳೆ ಮಾತನಾಡಿದ ಶಾಸಕ ಪ್ರೀತಂಗೌಡ, ನೇರ ಪಾವತಿ ಅಲ್ಲದೆ ಏಜೆನ್ಸಿ ಮೂಲಕ ಇರುವ ಪೌರಕಾರ್ಮಿಕರಿಗೂ ನೇರ ಪಾವತಿ ಆಗಬೇಕು. ನೀರು ಬಿಡುವವರು, ಚಾಲಕರು ಮತ್ತು ಯುಜಿಡಿ ಕಾರ್ಮಿಕರನ್ನೂ ಖಾಯಂ ಮಾಡಲು  ಸಮಿತಿಯಲ್ಲಿ ಚರ್ಚೆ ಮಾಡಲಾಗುವುದು. ಸಿಎಂ ಕಚೇರಿ ಜೊತೆ ಮಾತನಾಡಿ ನಾಳೆ ಸಂಜೆಯೊಳಗೆ ನಿಮ್ಮ ಸಂಬಳ ಹಾಕಿಸುವೆ ಎಂದು ಭರವಸೆ ನೀಡಿದರು.

ಸಂಬಳ ಗೊಂದಲವನ್ನು ನಾಳೆಯೊಳಗೆ ಬಗೆಹರಿಸಬೇಕು ಎಂದು ಸ್ಥಳದಲ್ಲಿದ್ದ ಪೌರಾಯುಕ್ತ ಪರಮೇಶ್ವರಪ್ಪ ಅವರಿಗೆ ಸೂಚನೆ ನೀಡಿದರು. ಏಜೆನ್ಸಿಯವರು ಯಾರೇ ಇದ್ದರೂ, ಅವರನ್ನು ಕಾರ್ಮಿಕರಿಗೆ ಪರಿಚಯಿಸಿ ಎಂದು ಹೇಳಿದರು.

ನೀವು ನಿಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದೀರಿ, ತೊಂದರೆ ಕೊಟ್ಟು ಪ್ರತಿಭಟನೆ ಮಾಡುವುದು ಬೇಡ ಎಂದು ಮನವಿ ಮಾಡಿದರು.

Join Whatsapp
Exit mobile version