ರಾಜ್ಯಾದ್ಯಂತ ಕೋವಿಡ್ ಮಹಾಮಾರಿಯಿಂದ ಜನತೆ ಕಂಗೆಟ್ಟು ಹೋಗಿದ್ದು, ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ನಡುವೆ ಪಂಚಾಯತ್ ರಾಜ್ ಮತ್ತು ಗ್ರಾಮಾಭಿವೃದ್ದಿ ಸಚಿವರಾದ ಈಷ್ವರಪ್ಪನವರು ನೀಡಿದ ದುಡಿಯುವ ವರ್ಗಕ್ಕೆ ಪರಿಹಾರ ನೀಡುವ ಬಗ್ಗೆ ಬೇಜವಾಬ್ದಾರಿಯುತ ಹೇಳಿಕೆಯನ್ನು ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ತೀವ್ರವಾಗಿ ಖಂಡಿಸಿದೆ.
ದುಡಿಯುವ ವರ್ಗದ ಕುಟುಂಬ ನಿರ್ವಹಣೆಯ ಬಗ್ಗೆ ಕಿಂಚಿತ್ ಆಲೋಚನೆ ಇಲ್ಲದ ಸರಕಾರ ಶ್ರಮಿಕರ ಯಾವುದೇ ಆಶೋತ್ತರಗಳನ್ನೂ ಈಡೇರಿಸದೆ ಹದಿನೈದು ದಿನಗಳ ಲಾಕ್‌ಡೌನ್ ಘೋಷಿಸಿದ್ದು ಇದು ಇನ್ನೂ ಮುಂದುವರಿಯುವ ಆತಂಕದಲ್ಲಿದೆ.
ಸರಕಾರ ಇದುವರೆಗೂ ಕಾರ್ಮಿಕರಿಗೆ ಪರಿಹಾರ ಅಥವಾ ಆಹಾರದ ಭದ್ರತೆ ನೀಡದೆ,ದುಡಿಯಲು ಹೊರಬಾರದಂತೆ ಮನೆಯಲ್ಲಿರಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದ್ದು,ಈ ಸಂಕಷ್ಟದ ಸಮಯದಲ್ಲಿ ಸರಕಾರದ ಮಂತ್ರಿಗಳಾದ ಈಶ್ವರಪ್ಪನವರು ಪರಿಹಾರ ನೀಡಲು ದುಡ್ಡು ಪ್ರಿಂಟ್ ಮಾಡ್ತೀವಾ ಅನ್ನುವ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದು ಸರಕಾರ ಸಂಪೂರ್ಣವಾಗಿ ವೈಫಲ್ಯವಾಗಿರುವುದಕ್ಕೆ ಕೈಗನ್ನಡಿಯಾಗಿರುತ್ತದೆ ಎಂದು SDTU ರಾಜ್ಯಾದ್ಯಕ್ಷರಾದ ಅಬ್ದುಲ್ ರಹೀಂ ಪಟೇಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕರಿಗೆ ಹತ್ತು ಸಾವಿರ ರೂಪಾಯಿ ಪರಿಹಾರ ಧನವನ್ನು ನೀಡಬೇಕೆಂದು SDTU ಆಗ್ರಹಿಸಿದೆ.