Home ಕರಾವಳಿ ‘ಕೇರಳ ಸ್ಟೋರಿ’ ಸಿನಿಮಾ ನಿಷೇಧ, ನಿರ್ಮಾಪಕರ ಬಂಧನಕ್ಕೆ ಆಗ್ರಹಿಸಿ SDPI ಪ್ರತಿಭಟನೆ

‘ಕೇರಳ ಸ್ಟೋರಿ’ ಸಿನಿಮಾ ನಿಷೇಧ, ನಿರ್ಮಾಪಕರ ಬಂಧನಕ್ಕೆ ಆಗ್ರಹಿಸಿ SDPI ಪ್ರತಿಭಟನೆ

ಮಂಜೇಶ್ವರ : ಕೇರಳವನ್ನು ಅವಹೇಳನ ಮಾಡುವ ಕೇರಳ ಸ್ಟೋರಿ ಚಲನಚಿತ್ರವನ್ನು ನಿಷೇಧಿಸಬೇಕು ಮತ್ತು ನಿರ್ಮಾಪಕ/ನಿರ್ದೇಶಕರ ಬಂಧನಕ್ಕೆ ಒತ್ತಾಯಿಸಿ SDPI ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಯ ಅಂಗವಾಗಿ ಮಂಜೇಶ್ವರ ಮಂಡಲ ಸಮಿತಿಯ ಆಶ್ರಯದಲ್ಲಿ ಬುಧವಾರ ಸಂಜೆ 5:30 ಗಂಟೆಗೆ ಉಪ್ಪಳದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಇಕ್ಬಾಲ್ ಹೊಸಂಗಡಿ, ಸರ್ವ ಧರ್ಮೀಯರೂ ಸಮನ್ವಯತೆಯಿಂದ ಬದುಕುತ್ತಿರುವ ಕೇರಳವನ್ನು ಧಾರ್ಮಿಕವಾಗಿ ವಿಭಜಿಸಿ, ಕೇರಳದ ಏಕತೆಯನ್ನು ಒಡೆಯುವ ಉದ್ದೇಶದಿಂದ ತಯಾರಾದ ಕೇರಳ ಸ್ಟೋರಿ ಸಿನಿಮಾವನ್ನು ನಿಷೇಧಿಸಿ, ಸಿನಿಮಾ ತಯಾರಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಂಡಲಾಧ್ಯಕ್ಷರಾದ ಅಶ್ರಫ್ ಬಡಾಜೆ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಂಡಲ ಕಾರ್ಯದರ್ಶಿ ಶರೀಫ್ ಪಾವೂರ್ ಸ್ವಾಗತಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ ಮಾತನಾಡಿದರು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಇಂತಿಯಾಝ್ ಉಪ್ಪಳ ವಂದಿಸಿದರು.

‘ದಿ ಕೇರಳ ಸ್ಟೋರಿ’ ಸಿನಿಮಾದ ವಿರುದ್ಧ ಕೇರಳ ಸೇರಿದಂತೆ ದೇಶದಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಕಪೋಲಕಲ್ಪಿತ ಕಥೆ ಹಾಗೂ ಕೇರಳ ರಾಜ್ಯಕ್ಕೇ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಈ ಸಿನಿಮಾ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಮುಸ್ಲಿಮ್ ಸಮುದಾಯವನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಇಂತಹ ಚಿತ್ರವನ್ನು ರಿಲೀಸ್ ಮಾಡದಂತೆ ಒತ್ತಾಯಗಳು ಮೊಳಗುತ್ತಿದ್ದು, ಸಂಘ ಪರಿವಾರದವರು ಸೇರಿಕೊಂಡು, ಒಂದು ಸಮುದಾಯದ ವಿರುದ್ಧ ಕೆಟ್ಟ ಅಭಿಪ್ರಾಯ ಹುಟ್ಟುವಂತೆ ಈ ಸಿನಿಮಾವನ್ನು ತೋರಿಸಲು ಹೊರಟಿದ್ದಾರೆ. ಇದು ಕೇರಳ ರಾಜ್ಯಕ್ಕೂ ಅಪಮಾನ ಮಾಡುವಂತಹ ಚಿತ್ರ, ಹಾಗಾಗಿ ಕೂಡಲೇ ಬಿಡುಗಡೆಯನ್ನು ತಡೆಯಬೇಕು ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

Join Whatsapp
Exit mobile version