Home ಕರಾವಳಿ SDPI ಹೋರಾಟದ ಪ್ರತಿಫಲ | ಸೋಮವಾರದಿಂದ ಹೆದ್ದಾರಿ ದುರಸ್ತಿ ಕಾಮಗಾರಿ ಆರಂಭದ ಭರವಸೆ

SDPI ಹೋರಾಟದ ಪ್ರತಿಫಲ | ಸೋಮವಾರದಿಂದ ಹೆದ್ದಾರಿ ದುರಸ್ತಿ ಕಾಮಗಾರಿ ಆರಂಭದ ಭರವಸೆ

ಬಂಟ್ವಾಳ : ಹೊಂಡಗಳಿಂದ ತುಂಬಿ, ತೀವ್ರ ಹದಗೆಟ್ಟಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ ಸೋಮವಾರದಿಂದಲೇ ಆರಂಭಿಸುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಸ್ ಡಿಪಿಐ ಮುಖಂಡರಿಗೆ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ನಡೆಸಲುದ್ದೇಶಿಸಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಬಂಟ್ವಾಳ ಮಿನಿ ವಿಧಾನಸೌಧದ ಮುಂಭಾಗ ಪಕ್ಷದ ಮುಖಂಡರು ಬಂಟ್ವಾಳ ನಗರ ಪೊಲೀಸರ ಸಮ್ಮುಖದಲ್ಲಿ ಹೆದ್ದಾರಿ ಪ್ರಾಧಿಕಾರದ ಪರವಾಗಿ ಆಗಮಿಸಿದ್ದ ಇಂಜಿನಿಯರ್ ಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಹೊಂಡ ಗುಮಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ನ.5ರಂದು ಹೆದ್ದಾರಿ ತಡೆ ಪ್ರತಿಭಟನೆ ನಡೆಸಲು ಎಸ್ ಡಿಪಿಐ ನಿರ್ಧರಿಸಿತ್ತು. ಆದರೆ, ಇದಕ್ಕೆ ಮಧ್ಯಪ್ರವೇಶಿಸಿದ್ದ ಪೊಲೀಸರು, ಹೆದ್ದಾರಿ ತಡೆಯಿಂದ ಸಮಸ್ಯೆಯಾಗುತ್ತದೆ, ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಆಯೋಜಿಸುವುದಾಗಿ ಭರವಸೆ ನೀಡಿದ್ದರು ಎಂದು ಎಸ್ ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ ತಿಳಿಸಿದ್ದಾರೆ.

ಪೊಲೀಸರ ಮನವಿಗೆ ಸ್ಪಂದಿಸಿ ನ.5ರಂದು ನಡೆಸಲುದ್ದೇಶಿಸಿದ್ದ ಹೆದ್ದಾರಿ ತಡೆ ಪ್ರತಿಭಟನೆ ಕೈಬಿಡಲಾಗಿತ್ತು. ಪೊಲೀಸರ ಭರವಸೆಯಂತೆ ಇಂದು ಪ್ರಾಧಿಕಾರದ ಅಧಿಕಾರಿಗಳ ಜೊತೆ ಮಾತುಕತೆ ನಡೆದಿದ್ದು, ಸೋಮವಾರದಿಂದ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ ಎಂದು ಖಲಂದರ್ ಹೇಳಿದ್ದಾರೆ. .

ಸೋಮವಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸದಿದ್ದರೆ, ಕಲ್ಲಡ್ಕದಿಂದ ಪಾಣೆಮಂಗಳೂರು ವರೆಗೆ ಪಕ್ಷದಿಂದ ಜಾಥಾ ನಡೆಸಿ, ಪಾಣೆ ಮಂಗಳೂರು ಮಾಂಡೋವಿ ಕಾರು ಶೋರೂಂ ಬಳಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಸಹಾಯಕ ಇಂಜಿನಿಯರ್ ವಿರುದ್ಧ ಸೈಟ್ ಇಂಜಿನಿಯರ್ ನಾಸಿರ್, ಬಂಟ್ವಾಳ ನಗರ ಠಾಣೆ ಎಸ್ ಐ ಅವಿನಾಶ್ ಉಪಸ್ಥಿತಿಯಲ್ಲಿ ಮಾತನಾಡಿದರು.

ಎಸ್ ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್., ಉಪಾಧ್ಯಕ್ಷ ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ, ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ, ಪುರಸಭಾ ಸದಸ್ಯ ಮುನೀಶ್ ಅಲಿ, ಪ್ರಮುಖರಾದ ಮಾಲಿಕ್ ಕೊಳಕೆ, ಸತ್ತಾರ್ ಕಲ್ಲಡ್ಕ, ಇಕ್ಬಾಲ್ ನಂದರಬೆಟ್ಟು, ಉಬೈದ್ ಬಂಟ್ವಾಳ, ರವೂಫ್ ಕಲಾಯಿ, ಫೈಝಲ್ ಮಂಚಿ ಮುಂತಾದವರು ಉಪಸ್ಥಿತರಿದ್ದರು.  

Join Whatsapp
Exit mobile version