ಕೊಲ್ಕತಾ : ಕೇಂದ್ರ ಸಚಿವ ಅಮಿತ್ ಶಾ ಅವರ ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸ ಆರಂಭದಲ್ಲೇ ವಿವಾದದ ಕೇಂದ್ರ ಬಿಂದುವಾಗಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಪ್ರಚಾರಕ್ಕೆ ಸಿದ್ಧತೆ ನಡೆಸಿರುವ ಬಿಜೆಪಿ, ಪಶ್ಚಿಮ ಬಂಗಾಳದ ಆದಿವಾಸಿ ಪ್ರಾಬಲ್ಯದ ಜಂಗಲ್ ಮಹಲ್ ಪ್ರದೇಶದಲ್ಲಿ ಪ್ರತಿಮೆ ರಾಜಕೀಯ ಮಾಡಲು ಹೋಗಿ ದೊಡ್ಡ ಮುಖಭಂಗಕ್ಕೆ ಎದುರಾಗಿದ್ದಾರೆ.
ಜಂಗಲ್ ಮಹಲ್ ಪ್ರದೇಶದ ಬಂಕುರಾ ಜಿಲ್ಲೆಯಲ್ಲಿ ಅಮಿತ್ ಶಾ ಇಂದು ಮೊದಲು, ಸ್ವಾತಂತ್ರ್ಯ ಹೋರಾಟದಲ್ಲಿ 25 ವರ್ಷದಲ್ಲೇ ಪ್ರಾಣ ಕಳೆದುಕೊಂಡ ಆದಿವಾಸಿ ನಾಯಕ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಹಾರ ಹಾಕಿ, ಗೌರವ ಸಲ್ಲಿಸುವುದಕ್ಕೆ ಸಿದ್ಧತೆ ನಡೆದಿತ್ತು.
ಆದರೆ, ಅವರು ಹಾರ ಅರ್ಪಿಸಲು ಸಿದ್ಧತೆ ನಡೆಸಿದ್ದ ಪ್ರತಿಮೆ ಬಿರ್ಸಾ ಮುಂಡಾ ಅವರದ್ದಲ್ಲ ಎಂಬುದನ್ನು ಆದಿವಾಸಿ ನಾಯಕರು ಬಿಜೆಪಿಗರ ಗಮನಕ್ಕೆ ತಂದಿದ್ದರು. ಆ ಪ್ರತಿಮೆ ಸಾಮಾನ್ಯ ಆದಿವಾಸಿ ಬೇಟೆಗಾರನದ್ದಾಗಿತ್ತು. ಹೀಗಾಗಿ ಆ ಪ್ರತಿಮೆಯ ಕೆಳಗೆ ಬಿರ್ಸಾ ಮುಂಡಾರ ಫೋಟೊ ಇಟ್ಟು ಅಮಿತ್ ಶಾ ಗೌರವ ಸಲ್ಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.
ಘಟನೆಯಿಂದ ಆಕ್ರೋಶಿತರಾಗಿರುವ ಸ್ಥಳೀಯ ಆದಿವಾಸಿ ಸಂಘನೆಯ ನಾಯಕರು, ಇದು ಬಿರ್ಸಾ ಮುಂಡಾ ಅವರಿಗೆ ಮಾಡಿದ ಅವಮಾನ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಸ್ಥಳೀಯ ಆದಿವಾಸಿ ಸಮುದಾಯದ ಜನರು ಪ್ರತಿಮೆ ಬಳಿ ಗಂಗಾ ಜಲ ಸಿಂಪಡಿಸಿ ಪ್ರತಿಮೆಯನ್ನು ‘ಶುದ್ಧೀಕರಿಸಿದ’ ಘಟನೆಯೂ ವರದಿಯಾಗಿದೆ.
ಭಗವಾನ್ ಬಿರ್ಸಾ ಮುಂಡಾರ ಬದಲಿಗೆ ಬೇರೊಂದು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮತ್ತು ಬೇರೊಬ್ಬರ ಕಾಲ ಕೆಳಗೆ ಅವರ ಫೋಟೊ ಇರಿಸುವ ಮೂಲಕ ಅವರಿಗೆ ಅವಮಾನಿಸಲಾಗಿದೆ. ಅಮಿತ್ ಶಾಗೆ ಪಶ್ಚಿಮ ಬಂಗಾಳದ ಸಂಸ್ಕೃತಿಯ ಬಗ್ಗೆ ಅರಿವಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.