Home ಟಾಪ್ ಸುದ್ದಿಗಳು PFI ನಿಷೇಧದ ವೇಳೆ ಬಂದ್ ಮಾಡಿದ್ದ SDPI ಕಚೇರಿಯ ಬೀಗ ತೆರವು

PFI ನಿಷೇಧದ ವೇಳೆ ಬಂದ್ ಮಾಡಿದ್ದ SDPI ಕಚೇರಿಯ ಬೀಗ ತೆರವು

ದಾವಣಗೆರೆ: ಪಿಎಫ್’ಐ ನಿಷೇಧದ ವೇಳೆ ಸೀಲ್ ಹಾಕಿದ್ದ ದಾವಣಗೆರೆ ಎಸ್’ಡಿಪಿಐ ಕಚೇರಿಯನ್ನು ಜಿಲ್ಲಾಧಿಕಾರಿಯ ಆದೇಶದನ್ವಯ ಗುರುವಾರ ತೆರವುಗೊಳಿಸಲಾಗಿದೆ.


ದಾವಣಗೆರೆಯ ಆಜಾದ್ ನಗರ (ಭಾಷನಗರ) ಮಿಲ್ಲತ್ ಕಾಲೇಜು ಎದುರಿರುವ ಖತೀಜಾಬಿ ಅವರ ಸೈಟ್ ನಂಬರ್ 14ರಲ್ಲಿರುವ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಎಸ್ ಡಿಪಿಐ ಕಚೇರಿಯನ್ನು ಪಕ್ಷದ ರಾಜಕೀಯ ಉದ್ದೇಶಗಳಿಗೆ ಹಾಗೂ ಪಕ್ಷದ ಕಾರ್ಯಚಟುವಟಿಕೆಗಳಿಗೆ ಸೀಮಿತಗೊಳಿಸಿ ಬಳಸಿಕೊಳ್ಳಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಅದರಂತೆ ದಾವಣಗೆರೆ ಉಪ ವಿಭಾಗಾಧಿಕಾರಿ ಮತ್ತು ಶೋಧನಾಧಿಕಾರಿಗಳ ಸಮ್ಮುಖದಲ್ಲಿ ಮಹಜರು ಮಾಡಿ ಕಚೇರಿಯ ಬೀಗ ತೆರವುಗೊಳಿಸಿ ಜಪ್ತಿ ಮಾಡಲಾದ ವಸ್ತುಗಳನ್ನು ಎಸ್.ಡಿಪಿಐ ಜಿಲ್ಲಾಧ್ಯಕ್ಷ ಇಸ್ಮಾಯೀಲ್ ಜಬೀವುಲ್ಲಾ ಅವರಿಗೆ ಒಪ್ಪಿಸಲಾಗಿದೆ.


ಈ ಹಿಂದೆ ಪಿಎಫ್’ಐ ಸಂಘಟನೆಯನ್ನು ನಿಷೇಧಿಸಿದಾಗ ಪೊಲೀಸರು ಎಸ್ ಡಿಪಿಐ ಕಚೇರಿಗೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ದಾವಣಗೆರೆ ಎಸ್ ಡಿಪಿಐ ಕಚೇರಿಯಲ್ಲಿ ಪಿಎಫ್’ಐ ಗೆ ಸೇರಿದ ಯಾವುದೇ ವಸ್ತುಗಳು ಸಿಕ್ಕಿರಲಿಲ್ಲ. ಆದರೂ ಪೊಲೀಸರು ಪಕ್ಷದ ಕಚೇರಿಗೆ ಬೀಗ ಜಡಿದಿದ್ದರು.


ಈ ಬಗ್ಗೆ ಪಕ್ಷದ ಜಿಲ್ಲಾಧ್ಯಕ್ಷರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯನ್ನು ಬಳಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು. ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿದ್ದ ಜಿಲ್ಲಾಧಿಕಾರಿಯವರು ಎಸ್ ಡಿಪಿಐ ಕಚೇರಿ ತೆರೆಯಲು ಆದೇಶ ಹೊರಡಿಸಿದ್ದರು.


ಪಕ್ಷದ ಕಚೇರಿ ತೆರವುಗೊಳ್ಳುತ್ತಿದ್ದಂತೆ ಕಾರ್ಯಕರ್ತರಲ್ಲಿ ಸಂತಸ ಮೂಡಿದ್ದು, ಚುನಾವಣೆಗೆ ರಾಜಕೀಯ ಚಟುವಟಿಕೆ ಬಿರುಸುಪಡೆದುಕೊಂಡಿದೆ.

Join Whatsapp
Exit mobile version