ಮಂಜನಾಡಿ : ಮಂಜನಾಡಿ ಗ್ರಾಮ ಪಂಚಾಯತಿಯಲ್ಲಿ ಕಳೆದ ತಿಂಗಳು ಜುಲೈ 30 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕಲ್ಕಟ್ಟ ಘನ ತ್ಯಾಜ್ಯ ಘಟಕದಲ್ಲಿ ಅವ್ಯವಹಾರ ನಡೆದ ಬಗ್ಗೆ ಸಂಶಯ ವ್ಯಕ್ತಪಡಿಸಿ ಈ ಬಗ್ಗೆ ಲೆಕ್ಕ ಕೊಡಬೇಕು ಎಂದು ಎಸ್ಡಿಪಿಐ ಬೆಂಬಲಿತ ಸದಸ್ಯ ನೌಶಾದ್ ಕಲ್ಕಟ್ಟ ಒತ್ತಾಯಿಸಿದ್ದಾರೆ.
ಈ ಬೇಡಿಕೆಗೆ ಸ್ಪಂದಿಸಿದ ಪಿಡಿಓ ಅವರು ಇಂಜಿನಿಯರ್, ಕಂಟ್ರಾಕ್ಟರ್, ಸದಸ್ಯರಾದ ನೌಶಾದ್ ಕಲ್ಕಟ್ಟ ಅವರನ್ನು ಕರೆದುಕೊಂಡು ಘನ ತ್ಯಾಜ್ಯದ ಘಟಕದ ಉದ್ದೇಶಿತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅಲ್ಲಿ ಮರು ಅಳತೆ ನಡೆಸಿ ಕಾಮಗಾರಿಯ ವಿವರ ನೀಡಿದರು.
ಸದ್ಯ ಮಂಜನಾಡಿ ಗ್ರಾಮ ಪಂಚಾಯತ್ ನಲ್ಲಿ ಎಸ್ಡಿಪಿಐ ಬೆಂಬಲಿತ ಐದು ಸದಸ್ಯರಿದ್ದು ನೌಶಾದ್ ಕಲ್ಕಟ್ಟ ಅವರ ನೇತೃತ್ವದಲ್ಲಿ ಪಂಚಾಯತ್ ನ ಸಮಸ್ಯೆಗಳ ಬಗ್ಗೆ ಸದಾ ಧ್ವನಿ ಎತ್ತುತ್ತಾ ಬರುತ್ತಿದ್ದಾರೆ. ಸಮಸ್ಯೆಯ ಮೂಲವನ್ನು ಕಂಡು ಹಿಡಿದು ಕರಾರುವಕ್ಕಾಗಿ ಲೆಕ್ಕ ಕೇಳುವ ಇವರ ಪ್ರಶ್ನೆಗಳಿಗೆ ಆಡಳಿತ ಪಕ್ಷದ ಸದಸ್ಯರು ಉತ್ತರವಿಲ್ಲದೇ ತಡವರಿಸುವುದು ಸಾಮಾನ್ಯವಾಗಿದೆ.
ಸದ್ರಿ ಘನ ತ್ಯಾಜ್ಯ ಅವ್ಯವಹಾರದ ಬಗ್ಗೆ ಪ್ರಶ್ನೆ ಎತ್ತಿದ ಸಂದರ್ಭದಲ್ಲೂ ಆಡಳಿತ ಪಕ್ಷದ ಸದಸ್ಯರು ಉತ್ತರವಿಲ್ಲದೇ ತಡಕಾಡಿದ ಪ್ರಸಂಗ ನಡೆದಿತ್ತು. ಕೊನೆಗೆ ಇಂಜಿನಿಯರ್, ಪಿಡಿಓ, ಕಂಟ್ರಾಕ್ಟರ್ ಸ್ಥಳಕ್ಕೆ ಭೇಟಿ ಕೊಟ್ಟು ವಿವರಣೆ ನೀಡಬೇಕಾಗಿ ಬಂತು. ಊರಿನ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೇ ನೇರವಾಗಿ ಪ್ರಶ್ನಿಸಿ ಸಮಸ್ಯೆ ಪರಿಹರಿಸುವ ನೌಶಾದ್ ಕಲ್ಕಟ್ಟ ಮತ್ತು ಎಸ್ಡಿಪಿಐ ಬೆಂಬಲಿತ ಇತರೆ ಸದಸ್ಯರ ನಡೆಯ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.