ಶಾಲಾ ಶಿಕ್ಷಣ ಸಚಿವರ ನೂತನ ವೆಬ್ ಪೋರ್ಟಲ್ ಲೋಕಾರ್ಪಣೆ

Prasthutha|

ಬೆಂಗಳೂರು: ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯಡಿ ನೂತನವಾಗಿ ಶಿಕ್ಷಣ ಸಚಿವರ ಜಾಲತಾಣ (EM Web Portal) ಹಾಗೂ ಶಿಕ್ಷಕರ ಕಲ್ಯಾಣ ನಿಧಿಯ 8 ಸೇವೆಗಳನ್ನು ಆನ್ ಲೈನ್ ಮೂಲಕ ಒದಗಿಸುವ ತಂತ್ರಾಂಶವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಸೇವೆಗೆ ಸಮರ್ಪಿಸಿದರು.

- Advertisement -


ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವೆಬ್ ಪೋರ್ಟಲ್ ಅನ್ನು ಸಚಿವರು ಲೋಕಾರ್ಪಣೆಗೊಳಿಸಿದರು.


‘ಶಾಲಾ ಶಿಕ್ಷಣ ಇಲಾಖೆಯ ಕುರಿತು ಅಗತ್ಯ ಮಾಹಿತಿ ಒದಗಿಸುವ ನೂತನ ವೆಬ್ ಪೋರ್ಟಲ್ schooleducationminister.karnataka.gov.in ಅಭಿವೃದ್ಧಿಪಡಿಸಲಾಗಿದೆ. ಈ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಶಿಕ್ಷಣ ಇಲಾಖೆಯ ನೌಕರರು ಇಲಾಖೆಗೆ ಸಂಬಂಧಿಸಿದ ಕುಂದು-ಕೊರತೆಗಳು, ದೂರುಗಳು, ಸಲಹೆಗಳು, ಅಭಿಪ್ರಾಯಗಳನ್ನು ನೀಡಬಹುದಾಗಿದೆ. ಪೋರ್ಟಲ್ ಮೂಲಕ ಸಲ್ಲಿಕೆಯಾಗುವ ದೂರುಗಳನ್ನು ಪರಿಹರಿಸುವುದು ಮತ್ತು ದೂರಿನ ಸ್ಥಿತಿ-ಗತಿಯನ್ನು ಆನ್ಲೈನ್ ಮೂಲಕವೇ ಟ್ರ್ಯಾಕ್ ಮಾಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ಸಚಿವ ನಾಗೇಶ್ ಮಾಹಿತಿ ನೀಡಿದರು.

- Advertisement -

‘ವೆಬ್ ಪೋರ್ಟಲ್ ನಲ್ಲಿ ರಾಜ್ಯದಲ್ಲಿರುವ ಶಾಲೆಗಳ ಸಂಖ್ಯೆ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಖ್ಯೆ, ಮಧ್ಯಾಹ್ನದ ಬಿಸಿಯೂಟ ಯೋಜನೆ ಸೇರಿದಂತೆ ಇನ್ನಿತರ ವಿವರಗಳನ್ನು ಒದಗಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಅಧೀನದ ವಿವಿಧ ಇಲಾಖೆಗಳು, ವೆಬ್ಸೈಟ್ ಲಿಂಕ್ ಲಭ್ಯವಿದೆ’ ಎಂದು ಸಚಿವರು ತಿಳಿಸಿದರು.

ಕಲ್ಯಾಣ ನಿಧಿ ಸೇವೆಗಳು ಆನ್ಲೈನ್:

http://kstbfonline.karnataka.gov.in ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಸದಸ್ಯತ್ವ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವೈದ್ಯಕೀಯ ಪರಿಹಾರ ಧನಸಹಾಯ, ಶಿಕ್ಷಕರ ಮಕ್ಕಳಿಗೆ ಉನ್ನತ ವ್ಯಾಸಂಗ ಧನ ಸಹಾಯ ಸೇರಿದಂತೆ ಇನ್ನಿತರ ಸೇವೆಗಳನ್ನು ಪಡೆದುಕೊಳ್ಳಲು ಶಿಕ್ಷಕರು ತಾವು ಕುಳಿತ ಸ್ಥಳದಿಂದಲೇ ಅರ್ಜಿ ಸಲ್ಲಿಸುವ ಮೂಲಕ ಸೇವೆ ಪಡೆದುಕೊಳ್ಳಬಹುದಾಗಿದೆ. ಶಿಕ್ಷಕರು ಈ ಸೇವೆಗಳಿಗಾಗಿ ಬೆಂಗಳೂರಿಗೆ ಬರುವುದು ತಪ್ಪಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಈ ಸೇವೆಗಳನ್ನು ಆನ್ಲೈನ್ಗೊಳಿಸಲಾಗಿದೆ. ಎಲ್ಲ ಸೇವೆಗಳು ಸುಲಭವಾಗಿ ಲಭ್ಯವಾಗುವ ಜೊತೆಗೆ ಅನಗತ್ಯ ಅಲೆದಾಟ ಮತ್ತು ವಿಳಂಬ ತಪ್ಪಲಿದೆ ಎನ್ನುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ , ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಆರ್. ವಿಶಾಲ್, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ ಕಾವೇರಿ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Join Whatsapp
Exit mobile version