ಬೆಂಗಳೂರು: ಸಮವಸ್ತ್ರ ಸಂಘರ್ಷದ ಹಿನ್ನೆಲೆ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಆರಂಭಗೊಂಡಿವೆ. 9, 10ನೇ ತರಗತಿ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿದ್ದಾರೆ.
ಶಾಲೆಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದು, ಸೂಕ್ಷ್ಮ ಪ್ರದೇಶಗಳಿಗೆ ಡಿಸಿ, ಎಸ್ಪಿ ಭೇಟಿ ನೀಡಬೇಕು. ಶಾಲಾ ಆಡಳಿತ ಮಂಡಳಿಗಳ ಜತೆ ಸಂಪರ್ಕದಲ್ಲಿರಬೇಕು. ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು, ಎಸ್ಪಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ, ಹೈಕೋರ್ಟ್ ಮಧ್ಯಂತರ ಆದೇಶವನ್ನು ಎಲ್ಲರೂ ಪಾಲಿಸಬೇಕು. ಬುಧವಾರದವರೆಗೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಕಾಲೇಜು ಆರಂಭದ ಬಗ್ಗೆ ಇಂದು ಸಿಎಂ ಸಭೆ ನಡೆಸಲಿದ್ದಾರೆ. ಶಾಲೆಗಳ ಬಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಪೋಷಕರು ಯಾರೂ ಭಯ ಪಡುವುದು ಬೇಡ ಎಂದಿದ್ದಾರೆ.