Home ಟಾಪ್ ಸುದ್ದಿಗಳು ದೇವಸ್ಥಾನ, ಮಾರುಕಟ್ಟೆಯಲ್ಲಿ ಜನರ ನಡವಳಿಕೆ ನೋಡಿದರೆ ಭಯವಾಗುತ್ತೆ: ಸಚಿವ ಸುಧಾಕರ್..!

ದೇವಸ್ಥಾನ, ಮಾರುಕಟ್ಟೆಯಲ್ಲಿ ಜನರ ನಡವಳಿಕೆ ನೋಡಿದರೆ ಭಯವಾಗುತ್ತೆ: ಸಚಿವ ಸುಧಾಕರ್..!

ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೊರೊನಾ ಹೊಸ ಸೋಂಕಿತರ ಪ್ರಮಾಣ ಶೇ. 1.5ಕ್ಕಿಂತ ಕಡಿಮೆ ಇದೆ. ಆದರೆ, ದೇವಸ್ಥಾನ, ಮಾರುಕಟ್ಟೆಯಲ್ಲಿನ ಜನರ ನಡವಳಿಕೆ ನೋಡಿದರೆ ಭಯವಾಗುತ್ತದೆ. ಹೀಗಾಗಿ, ಜನಸಾಮಾನ್ಯರು ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮನವಿ ಮಾಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರನೇ ಅಲೆ ಬರುವಂತೆ ಅವಕಾಶ ಕೊಡಬಾರದು. ಮೂರನೇ ಅಲೆ ತಡೆಯುವುದು ನಮ್ಮ ಕೈಯಲ್ಲೇ ಇದ್ದು, ಮುಂದೆ ಬರಬಹುದಾದ ಯಾವುದೇ ಅಲೆ ತಡೆಯಲು ನಾವು ನಮ್ಮ ನಡವಳಿಕೆಯಲ್ಲಿ ಬದಲಾವಣೆ ತರಲೇಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳಬೇಕು. ಜೊತೆಗೆ ಅನಗತ್ಯ ಸಭೆಯಲ್ಲಿ ಭಾಗಿಯಾಗುವುದು ತಪ್ಪಿಸಬೇಕು ಎಂದು ಹೇಳಿದರು.


ಅಲ್ಲದೆ, ಜನರ ಮನವಿ ಮೇರೆಗೆ ಸರ್ಕಾರವೂ ಮದುವೆ ಸಮಾರಂಭಕ್ಕೆ 100 ಜನರಿಗೆ ಅವಕಾಶ ಕೊಟ್ಟರೆ, 400-500 ಜನರು ಸೇರುತ್ತಿದ್ದಾರೆ. ಮಾರುಕಟ್ಟೆಯಲ್ಲೂ ಸಹ ಹೀಗೆ ಇದೆ. ಯಾವುದೇ ನಿಯಂತ್ರಣವಿಲ್ಲದೇ ಜನರು ಸೇರುವುದನ್ನು ನೋಡುತ್ತಾ ಇದ್ದರೆ ನಿಜಕ್ಕೂ ಭಯವಾಗುತ್ತಿದೆ. ಜನರು ಈಗಲಾದರೂ ಗಂಭೀರವಾಗಿ ತೆಗೆದುಕೊಂಡು ಆವಶ್ಯಕತೆ ಇದ್ದರಷ್ಟೇ ಮಾತ್ರ ಹೊರಗೆ ಹೋಗಿ ಬರಬೇಕು. ಮುಂದಿನ 3-4 ತಿಂಗಳು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.


ಅನೇಕ ರಾಜ್ಯಗಳಿಗೆ ಮೂರನೇ ಅಲೆ ಕಾಲಿಟ್ಟಿರುವ ಬಗ್ಗೆ ಹಲವು ವರದಿಗಳಲ್ಲಿ ಉಲ್ಲೇಖವಾಗಿರುವ ಬಗ್ಗೆ ಮಾತಾನಾಡಿದ ಅವರು, ಕೇರಳ, ಮಹಾರಾಷ್ಟ್ರ ರಾಜ್ಯಗಳನ್ನ ನೋಡಿದರೆ ಪ್ರಕರಣಗಳು ಹೆಚ್ಚಾಗಿವೆ. ಎರಡನೇ ಅಲೆಯಲ್ಲಿ ನಮ್ಮ ರಾಜ್ಯದ ರೀತಿ ಸೋಂಕಿತರ ಸಂಖ್ಯೆ ಕಡಿಮೆ ಆಗಲಿಲ್ಲ. ಕೇರಳದಲ್ಲಿ ಎರಡನೇ ಅಲೆಯಲ್ಲಿನ ಸೋಂಕಿತರ ಸಂಖ್ಯೆ ಕಡಿಮೆಯೇ ಆಗಿಲ್ಲ. ಹೀಗಾಗಿ, ಅಲ್ಲಿ ಇನ್ನು ಎರಡನೇ ಅಲೆ ಮುಗಿದಿಲ್ಲ ಎಂದು ತಿಳಿಸಿದರು.

ಮೂರನೇ ಅಲೆ ಆರಂಭವಾಗಿದೆಯಾ ಎಂಬುದನ್ನು ತಿಳಿಯಲು ಇನ್ನು ಕೆಲವು ದಿನಗಳು ಕಾಯಬೇಕು. ಕರ್ನಾಟಕದಲ್ಲಿ ಇನ್ನೂ ಮೂರನೇ ಅಲೆ ಆರಂಭವಾಗಿಲ್ಲ. ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಅದು ಶೇ.1 ಕ್ಕಿಂತ ಕಡಿಮೆ ಆಗಬೇಕು. ಆಗಷ್ಟೇ ಎರಡನೇ ಅಲೆ ಸಂಪೂರ್ಣ ಹೋಗಿದೆ ಎಂದು ಹೇಳಬಹುದು ಎಂದರು.

Join Whatsapp
Exit mobile version