ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರ ರಾಷ್ಟ್ರೀಯ ಸಮಾವೇಶ ಭವನದಲ್ಲಿ ಗುರುವಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾವರ್ಕರ್ ಚಿತ್ರವನ್ನು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಜೊತೆಯಲ್ಲಿ ಪ್ರದರ್ಶಿಸಿರುವುದಕ್ಕೆ ಕನ್ನಡಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ಕನ್ನಡ ಸಂಘಟನೆಗಳು, ಚಿತ್ರನಟರು, ಸಾಮಾಜಿಕ ಕಾರ್ಯಕರ್ತರು ಕೂಡ ಅಕಾಡಮಿಯ ಈ ನಡೆಯನ್ನು ಖಂಡಿಸಿದ್ದಾರೆ.
ಸಾವರ್ಕರ್ ಬ್ರಿಟಿಷರಿಗೆ ಹಲವು ಬಾರಿ ಕ್ಷಮಾಪಣಾ ಪತ್ರ ಬರೆದ ವ್ಯಕ್ತಿಯಾಗಿದ್ದು, ಗಾಂಧೀಜಿಯವರ ಹತ್ಯೆಯಲ್ಲಿಯೂ ಸಾವರ್ಕರ್ ಹೆಸರು ತಳುಕು ಹಾಕಿಕೊಂಡಿದೆ. ಇಂತಹ ವ್ಯಕ್ತಿಯ ಕಟೌಟ್ ಅನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸುವುದು ಸರಿಯಲ್ಲ ಎಂದು ಚಿತ್ರಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡ ಸಾವರ್ಕರ್ ಅವರನ್ನು ಹೊಗಳಿ ಹಾಕಿದ್ದ ಪೋಸ್ಟ್ ಹಲವು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಪುನಃ ಬಿಜೆಪಿ ನೇತೃತ್ವದ ಸರ್ಕಾರ ಸಾವರ್ಕರ್ ಪ್ರೇಮವನ್ನು ಮತ್ತೆ ಪ್ರದರ್ಶಿಸಲು ಪ್ರಾರಂಭಿಸಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ, ಗಾಂಧೀಜಿ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಸೈರಾ ನರಸಿಂಹ ರೆಡ್ಡಿ, ಸುಭಾಷ್ ಚಂದ್ರ ಬೋಸ್, ಒನಕೆ ಓಬವ್ವ ಸೇರಿದಂತೆ ಹಲವು ಮಾದರಿ ವ್ಯಕ್ತಿಗಳನ್ನು ನೃತ್ಯಪ್ರದರ್ಶನದ ಮೂಲಕ ಸ್ಮರಿಸಲಾಯಿತು. ಆದರೆ ಆ ಪೈಕಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೆನಪು ಮಾಡಿಕೊಳ್ಳಲಿಲ್ಲ. ಪ್ರದರ್ಶನದ ಅಂತ್ಯದಲ್ಲಿ ನೃತ್ಯ ತಂಡವು ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ವಿ.ಡಿ.ಸಾವರ್ಕರ್ ರ ಸುಮಾರು ಹತ್ತು ಅಡಿ ಎತ್ತರದ ಕಟೌಟ್ ಪ್ರದರ್ಶಿಸಿದೆ.