Home ಕರಾವಳಿ ವಿದ್ಯಾರ್ಥಿ ನವೀನ್ ಸಾವಿಗೆ ಸರ್ಕಾರ ಕಾರಣ: ವೆಲ್ಫೇರ್ ಪಾರ್ಟಿ ಆರೋಪ

ವಿದ್ಯಾರ್ಥಿ ನವೀನ್ ಸಾವಿಗೆ ಸರ್ಕಾರ ಕಾರಣ: ವೆಲ್ಫೇರ್ ಪಾರ್ಟಿ ಆರೋಪ

►ಮೋದಿಯ ವಿದೇಶಾಂಗ ನೀತಿಯ ವೈಫಲ್ಯದಿಂದ ಈ ಅನಾಹುತ

ಮಂಗಳೂರು: ಉಕ್ರೇನ್ ನಲ್ಲಿ ರಷ್ಯಾ ಸೇನೆಯ ದಾಳಿಗೆ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ. ಉಕ್ರೇನ್ ನಲ್ಲಿ ನವೀನ್ ಸಾವಿಗೆ ಯುದ್ಧದಾಹಿ ರಷ್ಯಾ ಸೇನೆ ಎಷ್ಟು ಹೊಣೆಯೋ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಸಕಾಲದಲ್ಲಿ ನೆರವಾಗದ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆರೋಪಿಸಿದ್ದಾರೆ.

ನಗರದ ಸ್ಟೇಟ್ ಬ್ಯಾಂಕ್ ಬಳಿಯಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಷ್ಯಾದ ಒಂದು ಲಕ್ಷ ಸೈನಿಕರು ಉಕ್ರೇನ್ ದೇಶವನ್ನು ಸುತ್ತುವರಿದಾಗಲೇ ಯುದ್ಧ ನಡೆಯುವ ಸೂಚನೆ ಸಿಕ್ಕಿತ್ತು. ಉಕ್ರೇನ್ನಲ್ಲಿರುವ ಭಾರತದ ಪ್ರಜೆಗಳನ್ನು ಭಾರತಕ್ಕೆ ವಾಪಸಾಗಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದರೆ ಇಂಥ ಅನಾಹುತ ನಡೆಯುತ್ತಿರಲಿಲ್ಲ ಎಂದು ಅವರು ಹೇಳಿದರು.

ಉಕ್ರೇನ್ ನಲ್ಲಿ ನೆಲೆಸಿರುವ 20 ಸಾವಿರ ಭಾರತೀಯರ ಪೈಕಿ 8 ಸಾವಿರ ಮಂದಿಯನ್ನು ಭಾರತಕ್ಕೆ ಕರೆತರಲಾಗಿದೆ. ಉಳಿದವರಲ್ಲಿ ಹಲವು ಮಂದಿ ಸರಿಯಾಗಿ ಊಟ, ನೀರು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಭಾರತೀಯ ರಾಯಭಾರ ಕಚೇರಿಯಿಂದಲೂ ಅವರಿಗೆ ಸ್ಪಷ್ಟಸೂಚನೆ ಸಿಗುತ್ತಿಲ್ಲ. ಭಾರತಕ್ಕೆ ಮರಳಿದವರ ಜತೆ ಫೋಟೊ ತೆಗೆಸಿಕೊಳ್ಳುವುದರಲ್ಲೇ ಕೇಂದ್ರ ಸಚಿವರು, ರಾಜ್ಯ ಸರ್ಕಾರದ ಸಚಿವರು ನಿರತರಾಗಿದ್ದಾರೆ ಎಂದು ಅವರು ಟೀಕಿಸಿದರು.

ಕುವೈಟ್, ಇರಾಕ್, ಲೆಬನಾನ್, ಲಿಬಿಯಾ ಯುದ್ಧದ ವೇಳೆ ಹಿಂದಿನ ಸರ್ಕಾರಗಳು ಆ ದೇಶಗಳಲ್ಲಿದ್ದ  ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿದ್ದವು. ಆ ಸಂದರ್ಭಗಳಲ್ಲಿ ವಿದೇಶಾಂಗ ಇಲಾಖೆ ದಕ್ಷತೆಯಿಂದ ಕೆಲಸ ಮಾಡಿತ್ತು. ಬಿಜೆಪಿ ಮುಖಂಡರಿಂದ ವಿಶ್ವಗುರು ಎಂದು ಕರೆಸಿಕೊಳ್ಳುವ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯ ವೈಫಲ್ಯವೇ ಈ ಅನಾಹುತಕ್ಕೆ ನೇರ ಕಾರಣ. ಕೂಡಲೇ ಕೇಂದ್ರ ಸರ್ಕಾರ ಉಕ್ರೇನ್ನಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಬೇಕು ಎಂದು ಆಗ್ರಹಿಸಿದರು.

ಇಬ್ಬಗೆಯ ನೀತಿ ಖಂಡನೀಯ:

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕನ್ಯಾಡಿಯಲ್ಲಿ ಕೊಲೆಯಾದ ದಲಿತ ಯುವಕನ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಬಿಜೆಪಿ ಮುಖಂಡರು ತೆರಳಿ ಸಾಂತ್ವನ ಹೇಳದಿರುವುದು, ಪರಿಹಾರ ನೀಡದೆ ಇರುವುದು ಖಂಡನೀಯ. ದಲಿತರಿಗೆ ಒಂದು ಬಗೆಯ ನಿಲುವು, ಇತರರ ಬಗ್ಗೆ ಒಂದು ರೀತಿಯ ನಿಲುವು ತಳೆಯುವ ಮನುವಾದಿ ಧೋರಣೆಯನ್ನು ಇದು ತೋರಿಸುತ್ತದೆ. ಶಿವಮೊಗ್ಗದಲ್ಲಿ ನಡೆದ ಹರ್ಷ ಅವರ ಕೊಲೆ ಸಂದರ್ಭ ವ್ಯಕ್ತಪಡಿಸಿದ ಅನುಕಂಪ, ಕರುಣೆಯನ್ನು ಈ ಪ್ರಕರಣದಲ್ಲಿ ಏಕೆ ತೋರಿಸಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲಿನ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. 8 ವರ್ಷಗಳಲ್ಲಿ 1,31,430 ದೌರ್ಜನ್ಯ ಪ್ರಕರಣ ನಡೆದಿವೆ. ಆದರೆ, ಆರೋಪಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಖಾವಿದಾರಿ ಮುಖ್ಯಮಂತ್ರಿ ಇರುವ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳು ನಡೆದಿವೆ ಎಂದು ಅವರು ದೂರಿದರು.

ರಾಜ್ಯದ ಆರೋಗ್ಯ ಸಚಿವರ ಮನಸ್ಸಿನಲ್ಲಿ ಅನಾರೋಗ್ಯ ತುಂಬಿ ತುಳುಕುತ್ತಿದೆ. ಬೌದ್ಧ ಧರ್ಮದ ಬಗ್ಗೆ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಇನ್ನೊಬ್ಬರನ್ನು ಮೆಚ್ಚಿಸಲು ಬ್ರಾಹ್ಮಣ ಸಂಘದ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮವನ್ನು ನಿಂದಿಸಿದ್ದಾರೆ. ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಅವರು ಹೇಳಿದರು.

19 ವರ್ಷಗಳ ಕಾಲ ದೇಶ ಸೇವೆ ಮಾಡಿ, ದೇಶಕ್ಕೋಸ್ಕರ ಹುತಾತ್ಮರಾಗಿರುವ ಮೊಹಮ್ಮದ್ ಅಲ್ತಾಫ್ ಅವರಿಗೆ ಗೌರವ ಸಲ್ಲಿಸಲಿಕೆ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಸಂಸದರು ಬರದೇ ಇರುವುದು ಖಂಡನೀಯ.

ರಾಜ್ಯದಲ್ಲಿ ಎಲ್ಲಿಯಾದರೂ ವೈಯಕ್ತಿಕ ವಿಚಾರಕ್ಕೆ ಕೊಲೆಗಳಾದರೆ ಅಥವಾ ಕೋಮು ಗಲಭೆಯಲ್ಲಿ ಸಾವು ಸಂಭವಿಸಿದರೆ ತಕ್ಷಣ ಸಚಿವರು ಹಾಗೂ ಸಂಸದರು ಭೇಟಿ ನೀಡುವುದರ ಜೊತೆಗೆ ವೈಯಕ್ತಿಕವಾಗಿ ಪರಿಹಾರಗಳನ್ನು ನೀಡುತ್ತಾರೆ. ಆದರೆ ತನ್ನ ಜೀವವನ್ನೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನ ಕುಟುಂಬವನ್ನು ಇನ್ನೂ ಭೇಟಿ ಮಾಡದೆ ಇರುವುದು ಅತ್ಯಂತ ಖಂಡನೀಯ ಎಂದ ಅವರು, ಸ್ವಂತ ಮನೆ ಕೂಡಾ ಇಲ್ಲದ ಬಡತನದಲ್ಲಿರುವ ಹುತಾತ್ಮ ಯೋಧನ ಕುಟುಂಬಕ್ಕೆ ಜಮೀನು ಹಾಗೂ ಮನೆ ಮತ್ತು ಮಕ್ಕಳ ವಿಧ್ಯಾಭ್ಯಾಸದ ಜೊತೆಗೆ ಅವರ ಕುಟುಂಬ ನಿರ್ವಹಣೆಗೆ ಬೇಕಾದ ವ್ಯವಸ್ಥೆಗಳನ್ನು ಸರಕಾರ ಕೂಡಲೇ ಮಾಡಬೇಕೆಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್, ರಾಜ್ಯ ಕಾರ್ಯದರ್ಶಿ ಅಝೀಝ್ ಜಾಗೀರ್ದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಮುಹಮ್ಮದ್ ಸೈಫ್ ಉಪಸ್ಥಿತರಿದ್ದರು.

Join Whatsapp
Exit mobile version