Home ಕ್ರೀಡೆ ಟೋಕಿಯೋ ಒಲಿಂಪಿಕ್ಸ್; ಸಾನಿಯಾ ಜೋಡಿಗೆ ಸೋಲು

ಟೋಕಿಯೋ ಒಲಿಂಪಿಕ್ಸ್; ಸಾನಿಯಾ ಜೋಡಿಗೆ ಸೋಲು

ಟೋಕಿಯೊ: ಭಾರತದ ಭರವಸೆಯಾಗಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಅಂಕಿತಾ ರೈನಾ ಜೋಡಿಯು ಟೋಕಿಯೊ ಒಲಂಪಿಕ್ಸ್‌ನಲ್ಲಿ ನಿರಾಸೆ ಮೂಡಿಸಿದೆ.

ಭಾನುವಾರ ನಡೆದ ಮಹಿಳಾ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಸಾನಿಯಾ-ಅಂಕಿತಾ ಜೋಡಿ ಉಕ್ರೇನ್‌ನ ಎಲ್. ಕಿಚೆನೋಕ್ ಹಾಗೂ ಎನ್. ಕಿಚೆನೋಕ್ ವಿರುದ್ಧ 6-0, 6-7, (8-10)ರ ಅಂತರದಲ್ಲಿ ಸೋಲು ಅನುಭವಿಸಿತು.

ಮೊದಲ ಸೆಟ್ ಅನ್ನು 6-0 ಅಂತರದಲ್ಲಿ ವಶಪಡಿಸಿದ್ದ ಸಾನಿಯಾ ಜೋಡಿ ಸುಲಭವಾಗಿ ಪಂದ್ಯ ಗೆಲ್ಲಬಹುದೆಂದು ನಿರೀಕ್ಷಿಸಲಾಗಿತ್ತು. ದ್ವಿತೀಯ ಸುತ್ತಿನಲ್ಲೂ ಒಂದು ಹಂತದಲ್ಲಿ 5-3ರ ಅಂತರದ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಬಳಿಕ ಪಂದ್ಯದಲ್ಲಿ ಹಿಡಿತ ಸಾಧಿಸಿದ ಉಕ್ರೇನ್‌ನ ಅವಳಿ ಜೋಡಿ, ಭಾರತೀಯರಿಗೆ ಅವಕಾಶವನ್ನೇ ನೀಡಲಿಲ್ಲ.

ಅಂತಿಮವಾಗಿ ಕಠಿಣ ಹೋರಾಟದಲ್ಲಿ ಸೋಲೊಪ್ಪಿಕೊಳ್ಳಬೇಕಾಯಿತು. ಇದರೊಂದಿಗೆ ಮಹಿಳಾ ಡಬಲ್ಸ್ ವಿಭಾಗದಲ್ಲಿ ಪದಕದ ಆಸೆ ಕಮರಿದೆ.

ಅಂಕಿತಾಗೆ ಇದು ಚೊಚ್ಚಲ ಒಲಿಂಪಿಕ್ಸ್ ಅನುಭವ ಸಾನಿಯಾ ಪಾಲಿಗಿದು ನಾಲ್ಕನೇ ಒಲಿಂಪಿಕ್ಸ್.

Join Whatsapp
Exit mobile version