Home ಟಾಪ್ ಸುದ್ದಿಗಳು ಮಾಜಿ ಸಚಿವ ನವಾಬ್ ಮಲಿಕ್ ವಿರುದ್ಧ ಕೇಸ್ ದಾಖಲಿಸಿದ ಸಮೀರ್ ವಾಂಖೆಡೆ

ಮಾಜಿ ಸಚಿವ ನವಾಬ್ ಮಲಿಕ್ ವಿರುದ್ಧ ಕೇಸ್ ದಾಖಲಿಸಿದ ಸಮೀರ್ ವಾಂಖೆಡೆ

ಮುಂಬೈ: NCB ಮುಂಬೈ ವಲಯದ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಅವರು ನೀಡಿದ ದೂರಿನ ಆಧಾರದಲ್ಲಿ ಮಾಜಿ ಸಚಿವ, NCP ಮುಖಂಡ ನವಾಬ್ ಮಲಿಕ್ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಹಾರಾಷ್ಟ್ರ ಸಾಮಾಜಿಕ ನ್ಯಾಯ ಇಲಾಖೆಯ ಅಧೀನದಲ್ಲಿರುವ ಮುಂಬೈ ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಯಿಂದ ಕ್ಲೀನ್ ಚಿಟ್ ಪಡೆದ ಬಳಿಕ ಸಮೀರ್ ವಾಂಖೆಡೆ ಅವರು ದೂರು ನೀಡಿದ್ದರು.

ಸದ್ಯ ನವಾಬ್ ಮಲಿಕ್ ವಿರುದ್ಧ ಮುಂಬೈನ ಗೋರೆಗಾಂವ್ ಪೊಲೀಸರು ಐಪಿಸಿ ಸೆಕ್ಷನ್ 500, 501 ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಂಬೈ ನಗರ ಜಿಲ್ಲಾ ಪ್ರಮಾಣಪತ್ರ ಪರಿಶೀಲನಾ ಸಮಿತಿ ಆಗಸ್ಟ್ 13 ರಂದು ಸಮೀರ್ ವಾಂಖೆಡೆ ಅವರ ಕುಟುಂಬದ ವಿರುದ್ಧ ದಾಖಲಾಗಿದ್ದ ದೂರುಗಳನ್ನು ರದ್ದುಗೊಳಿಸಿ ಸಮೀರ್ ಅವರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ದೃಢಪಡಿಸಿದ ಬಳಿಕ ಈ ಎಲ್ಲಾ ಬೆಳವಣಿಗೆ ನಡೆದಿದೆ.

ಸದ್ಯ ಅಕ್ರಮ ವರ್ಗಾವಣೆಯ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಬಂಧನಕ್ಕೊಳಗಾದ ಮಾಜಿ ಸಚಿವ ನವಾಬ್ ಮಲಿಕ್ ಅವರು ಜೈಲಿನಲ್ಲಿದ್ದಾರೆ. ಕುಖ್ಯಾತ ಡಾನ್ ದಾವೂದ್ ಇಬ್ರಾಹಿಂ ನಿಕಟವರ್ತಿಯೊಂದಿಗೆ ಸಂಬಂಧ ಹೊಂದಿರುವ ಆರೋಪ ಮತ್ತು ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 23, 2022 ರಂದು ನವಾಬ್ ಮಲಿಕ್ ಅವರನ್ನು ಇಡಿ ಬಂಧಿಸಿತ್ತು.

ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಬಳಿಕ, ಮೀಸಲಾತಿ ಮೂಲಕ ಐ.ಆರ್. ಎಸ್. ಅಧಿಕಾರಿಯಾಗಿ ನೇಮಕವಾಗಲು ನಕಲಿ ಜಾತಿ ಪ್ರಮಾಣಪತ್ರವನ್ನು ಪಡೆದು ಉದ್ಯೋಗ ಪಡೆದಿದ್ದರು ಎಂದು ಸಮೀರ್ ವಾಂಖೆಡೆ ವಿರುದ್ಧ ಮಾಜಿ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ ಹೊರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಾತಿ ಪರಿಶೀಲನಾ ಸಮಿತಿಗೆ ವಹಿಸಲಾಗಿತ್ತು.

ಇದೀಗ ಜಾತಿ ಪರಿಶೀಲನಾ ಸಮಿತಿಯು ಸಮೀರ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದು, ತನ್ನ ವಿರುದ್ಧ ಸುಳ್ಳಾರೋಪ ಮಾಡಿದ್ದಾರೆ ಎಂದು ದೂರಿ ನವಾಬ್ ಮಲಿಕ್ ವಿರುದ್ಧ ಸಮೀರ್ ದೂರು ನೀಡಿದ್ದಾರೆ. ಇದರನ್ವಯ ನವಾಬ್ ವಿರುದ್ಧ ಪ್ರಕರಣ ದಾಖಲಾಗಿದೆ.

Join Whatsapp
Exit mobile version