Home ಟಾಪ್ ಸುದ್ದಿಗಳು ಸಲೀಂ ಹಸನ್ ಚಿಸ್ತಿಗೆ ಎಚ್. ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ

ಸಲೀಂ ಹಸನ್ ಚಿಸ್ತಿಗೆ ಎಚ್. ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ನಾಡಿನ ಪ್ರಸಿದ್ಧ ಸಾಹಿತಿ, ಪ್ರವಾಸಿ ಕಂಡ ಇಂಡಿಯಾ ಮಾಲಿಕೆಯ ಕರ್ತೃ, ಜಾನಪದಲೋಕ ನಿರ್ಮಾತೃ ನಾಡೋಜ ಎಚ್.ಎಲ್. ನಾಗೇಗೌಡರ ನೆನಪಿನಲ್ಲಿ ಅವರು ಕಟ್ಟಿ ಬೆಳೆಸಿದ `ಕರ್ನಾಟಕ ಜಾನಪದ ಪರಿಷತ್ತು’ ಸಂಸ್ಥೆ ನೀಡುವ ಪ್ರಶಸ್ತಿಗೆ “ಜನಾಬ್ ಮುಹಮ್ಮದ್ ಸಲೀಂ ಹಸನ್ ಚಿಸ್ತಿ” ಆಯ್ಕೆಯಾಗಿದ್ದಾರೆ.

ಪ್ರತಿ ವರ್ಷ ರಾಷ್ಟ್ರಮಟ್ಟದ ಜನಪದ ಕಲಾವಿದರನ್ನು ಗುರುತಿಸಿ ನೀಡುತ್ತಿರುವ ಪ್ರಶಸ್ತಿ ಇದಾಗಿದ್ದು, ಒಂದು ಲಕ್ಷ ರೂ ನಗದು, ಪ್ರಶಸ್ತಿ ಫಲಕಗಳನ್ನು ಇದು ಒಳಗೊಂಡಿದೆ. 2020ನೇ ಸಾಲಿನ ಪ್ರಶಸ್ತಿಯನ್ನು ಇದೇ ತಿಂಗಳ 27 ರಂದು ಸಲೀಂ ಹಸನ್ ಚಿಸ್ತಿ ಅವರಿಗೆ ನೀಡಿ ಗೌರವಿಸಲಾಗುತ್ತಿದೆ.

ಉತ್ತರ ಪ್ರದೇಶದ ಉಸ್ತಾದ್ ಸಲೀಂ ಹಸನ್ ಚಿಸ್ತಿ ಅವರು ಭಾರತದ ಸೂಫಿ ಸಂಗೀತದ ಅಗ್ರಮಾನ್ಯ ಹೆಸರುಗಳಲ್ಲಿ ಒಬ್ಬರು. ಆಗ್ರಾದ ಫತೇಪುರ್ ಸಿಕ್ರಿ ದರ್ಗಾದಲ್ಲಿ ಮತ್ತು ರಾಜ ಅಕ್ಬರ್ನ ದರಬಾರಿನಲ್ಲಿ ಸೂಫಿ ಸಂಗೀತದ ಪರಂಪರೆಯನ್ನು ಸುಶ್ರಾವ್ಯವಾಗಿ ಹಾಡುತ್ತಾ ಬಂದಿರುವ 17ನೇ ತಲೆಮಾರಿನವರು ಇವರು. ಫತೇಪುರ್ ಸಿಕ್ರಿಯ ಖ್ವಾಜಾ ಮೊಹಿನುದ್ದೀನ್ ಚಿಸ್ತಿ ಅವರ ಪರಂಪರೆಯಲ್ಲಿ ಪಳಗಿದ ಶೇಕ್ ಸಲೀಂ ಚಿಸ್ತಿ ಮತ್ತು ನೂರ್ ಮುಹಮ್ಮದ್ ಚಿಸ್ತಿ ಹೆಸರಾಂತ ಸೂಫಿ ಗಾಯಕರ ಗರಡಿಯಲ್ಲಿ ವಿಭಿನ್ನ ರಾಗಗಳ ಸಂಯೋಜನೆಯಲ್ಲಿ ಕವ್ವಾಲಿಗಳನ್ನು ಹಾಡುವ ಮುಹಮ್ಮದ್ ಸಲೀಂ ಹಸನ್ ಚಿಸ್ತಿ ಅವರಿಗೆ ಈ ಸಾಲಿನ ನಾಡೋಜ ಎಚ್. ಎಲ್. ನಾಗೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಸಲೀಂ ಹಸನ್ ಚಿಸ್ತಿ ಅವರು ದೇಶ-ವಿದೇಶಗಳಲ್ಲಿ ತಮ್ಮ ಕವ್ವಾಲಿ ಸಂಗೀತವನ್ನು ಸೂಫಿ ಸಂಗೀತ ಪ್ರಿಯರಿಗೆ ಉಣಬಡಿಸಿದ್ದಾರೆ. ಅಕಾಶವಾಣಿಯ “ಎ” ಗ್ರೇಡ್ ಕಲಾವಿದರೂ ಆಗಿರುವ ಇವರು ದೂರದರ್ಶನ, ಜೀ-ಮ್ಯೂಸಿಕ್, ಟಿ-ಸಿರೀಸ್ ಇತರೆ ನೂರಾರು ಟಿವಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಿಂದಿ ಸಿನೆಮಾಗಳಾದ “ಪರದೇಶ್”, “ಜಿಗರಿಯಾ” ಮತ್ತು “ವಹಾಂ ತಾಜ್” ಸಿನಿಮಾಗಳಲ್ಲಿ ಇವರ ಸಂಗೀತ ಸುಧೆಯು ಪರವಶಗೊಳಿಸುವ ಮಾಧುರ್ಯ ತುಂಬಿದ ಗೀತೆಗಳು ಪ್ರಸಿದ್ಧವಾಗಿವೆ. ಇವರ ಸಂಗೀತ ಸೇವೆಯನ್ನು ಗುರುತಿಸಿ ಕ್ಯಾಲಿಫೋರ್ನಿಯಾ ಸಂಗೀತ ವಿಶ್ವವಿದ್ಯಾಲಯವು ಇವರನ್ನು ಸನ್ಮಾನಿಸಿ ಗೌರವಿಸಿದೆ. ಶ್ರೀಲಂಕಾ, ದುಬೈ, ಬ್ರಿಟನ್ ಮತ್ತು ಬಾಂಗ್ಲ ದೇಶಗಳ ಜಾಗತಿಕ ಸಂಗೀತ ವೇದಿಕೆಗಳಲ್ಲಿ ಇವರು ಸೂಫಿ ಕವ್ವಾಲಿಗಳನ್ನು ಹಾಡಿ ದಿಗ್ಗಜರೆನಿಸಿಕೊಂಡಿದ್ದಾರೆ.

Join Whatsapp
Exit mobile version