ಬೆಂಗಳೂರ: ರಾಜ್ಯದಲ್ಲಿ ವ್ಯಾಪಕ ಮಳೆಯಿಂದ ಬೆಳೆ ಹಾನಿಗೀಡಾಗಿದ್ದು, ಈ ಸಂದರ್ಭದಲ್ಲಿ ಸರ್ಕಾರ ವಿಮಾ ಕಂಪನಿಗಳ ಜತೆ ಶಾಮೀಲಾಗಿದೆ. ರೈತರ ಬದಲು ವಿಮಾ ಕಂಪನಿಗಳಿಗೆ ನೆರವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆಹಾನಿಗೊಳಗಾಗಿರುವ ರೈತರಿಗೆ ತಕ್ಷಣವೇ ಮಧ್ಯಂತರ ಪರಿಹಾರ ನೀಡಬೇಕು. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಸರಿಯಾಗಿ ಪ್ರಯೋಜನವಾಗಿಲ್ಲ. ಅದರಿಂದ ಬಂದಷ್ಟು ಬರಲಿ. ಆದರೆ ರಾಜ್ಯ ಸರಕಾರದಿಂದ ಪೂರ್ಣ ಪ್ರಮಾಣದ ಪರಿಹಾರ ಸಿಗಬೇಕು ಎಂದರು.
ಬೆಳೆ, ಜಮೀನಿಗೆ ಹಾನಿಯಾಗಿರುವ ರೈತರಿಗೆ ಕಂದಾಯ ಮನ್ನಾ ಮಾಡಬೇಕು. ಸೂಕ್ತ ರೀತಿಯಲ್ಲಿ ಪರಿಹಾರ ಕೊಡದ ವಿಮಾ ಕಂಪೆನಿಗಳನ್ನು ಕಪ್ಟುಪಟ್ಟಿಗೆ ಸೇರಿಸಿ ರಾಜ್ಯದಿಂದ ಹೊರಗೆ ಕಳುಹಿಸಬೇಕು. ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ ರೈತರಿಗೆ ನೆರವಾಗಲು ಫಸಲ್ ಭಿಮಾ ಯೋಜನೆ ಜಾರಿಗೆ ತಂದಿದ್ದು, ಅದು ರೈತರಿಗೆ ನ್ಯಾಯ ಒದಗಿಸುವ ಬದಲು ಅನ್ಯಾಯ ಮಾಡುತ್ತಿದೆ. ಈ ಯೋಜನೆಯಲ್ಲಿ ರೈತ ಬೆಳೆ ವಿಮೆ ನೋಂದಣಿಗೆ ಕಾಲಮಿತಿ ನಿಗದಿ ಮಾಡಲಾಗಿದೆ. ಆದರೆ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲು ಈ ಕಾಲಮಿತಿ ಅನ್ವಯ ಆಗುತ್ತಿಲ್ಲ. ರೈತರು ಸರಿಯಾದ ಸಮಯದಲ್ಲಿ ಬೆಳೆ ವಿಮೆ ಕಂತು ಕಟ್ಟಿದರೂ, ಅವರಿಗೆ ಪರಿಹಾರ ಸಿಗುತ್ತಿಲ್ಲ ಎಂದರು.
ಸರಕಾರದ ಘೋಷಣೆಗಳು ಕಾಗದದ ಮೇಲಷ್ಟೇ ಉಳಿದಿವೆ. ಪೂರ್ತಿ ಮನೆ ಬಿದ್ದವರಿಗೆ 5 ಲಕ್ಷ ರೂ, ಅರ್ಧ ಮನೆ ಬಿದ್ದವರಿಗೆ ಒಂದು ಲಕ್ಷ ಪರಿಹಾರ ಕೊಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಪರಿಹಾರ ವಿತರಣೆಯಾಗುತ್ತಿದೆಯೇ ಎಂಬ ಮಾಹಿತಿ ನೀಡಬೇಕು. ಇದೇ ರೀತಿಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ರೈತರ ಹೊಲ, ಗದ್ದೆಗಳಿಗೂ ಎಕರೆಗೆ 10 ಸಾವಿರ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ನೆರೆ ಹಾನಿಗೆ ಸೂಕ್ತ ಪರಿಹಾರ ದೊರೆತಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ನಿರಂತರ ಅನ್ಯಾಯವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿಯಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಇಷ್ಟಾದರೂ ರಾಜ್ಯದ 25 ಸಂಸದರು ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ. ಇಷ್ಟೆಲ್ಲಾ ಅನಾಹುತವಾಗುತ್ತಿದ್ದರೂ ರಾಜ್ಯದ ಪರವಾಗಿ ಕೇಂದ್ರಕ್ಕೆ ಅವರು ಒಂದೇ ಒಂದು ಅರ್ಜಿ ಕೊಟ್ಟಿಲ್ಲ ಎಂದು ಹೇಳಿದರು.
ಬಿಜೆಪಿ ಮುಗಿಸಲು ಸಿ.ಟಿ. ರವಿ ಸಾಕು: ಸಿ.ಟಿ. ರವಿ ದೇಶದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ. ಅವರನ್ನು ಬಿಜೆಪಿ ಯಾಕೆ ಇಟ್ಟುಕೊಂಡಿದೆಯೋ ಗೊತ್ತಿಲ್ಲ. ಬಿಜೆಪಿ ಮುಗಿಸಲು ಇವರೊಬ್ಬರೇ ಸಾಕು. ಅವರು ಬಹಳ ಒಳ್ಳೆಯ ದೇಶಪ್ರೇಮದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರು.