ಮುಂಬೈ: ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿಯೊಂದರ ವೇಳೆ ದಾಳಿ ಮಾಡಿ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್’ನನ್ನು ಬಂಧಿಸುವ ಮೂಲಕ ಭಾರಿ ಸುದ್ದಿಯಾಗಿದ್ದ ಮಾಜಿ NCB ಅಧಿಕಾರಿ ಸಮೀರ್ ವಾಂಖೆಡೆಗೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ.
ಶಾರುಖ್ ಪುತ್ರನ ಬಂಧನದ ಬಳಿಕ ಸಾಕಷ್ಟು ವಿವಾದಕ್ಕೆ ಸಿಲುಕಿದ್ದ ಸಮೀರ್ ವಾಂಖೆಡೆಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ- NCBಯ ಮುಂಬೈಯ ಝೋನಲ್ ಅಧಿಕಾರಿ ಸ್ಥಾನದಿಂದ ವರ್ಗಾವಣೆ ಮಾಡಲಾಗಿತ್ತು. ಇದೀಗ ನವೀ ಮುಂಬಯಿಯಲ್ಲಿರುವ ಸಮೀರ್ ವಾಂಖೆಡೆ ಮಾಲೀಕತ್ವದ ಸದ್ಗುರು ಹೋಟೆಲ್ & ಬಾರ್’ಗೆ ನೀಡಲಾಗಿದ್ದ ಪರವಾನಿಗೆಯನ್ನು ಥಾಣೆ ಜಿಲ್ಲಾಧಿಕಾರಿ ರಾಜೇಶ್ ನರ್ವೇಕರ್ ರದ್ದು ಮಾಡಿದ್ದಾರೆ.
1997ರಲ್ಲಿ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸುವ ವೇಳೆ ಸಮೀರ್ ವಾಂಖೆಡೆ ತಮ್ಮ ವಯಸ್ಸನ್ನು ತಪ್ಪಾಗಿ ನಮೂದಿಸಿದ್ದಾರೆ.ಈ ಕಾರಣದಿಂದಾಗಿ ಅವರ ಬಾರ್ ಲೈಸೆನ್ಸ್ ಅನ್ನು ಜಿಲ್ಲಾಧಿಕಾರಿ ರದ್ದು ಮಾಡಿದ್ದಾರೆ.
ಸಮೀರ್ ವಾಂಖೆಡೆ ಹೆಸರಿನಲ್ಲಿ ಇರುವ ಹೊಟೇಲ್ & ಬಾರ್’ನ ಲೈಸೆನ್ಸ್ ರದ್ದು ಮಾಡುವಂತೆ ಆಗ್ರಹಿಸಿ NCP ಮುಖಂಡ, ಸಚಿವ ನವಾಬ್ ಮಲಿಕ್ ಈ ಹಿಂದೆಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ‘ಅಖಿಲ ಭಾರತೀಯ ಸೇವೆ’ಯಲ್ಲಿರುವ ಅಧಿಕಾರಿಯೊಬ್ಬರು ಬಾರ್ ಲೈಸೆನ್ಸ್ ಪಡೆಯಲು ಹೇಗೆ ಸಾಧ್ಯವಾಯಿತು? ಅವರು ಸುಳ್ಳು ದಾಖಲೆಗಳನ್ನು ನೀಡಿ ಅನುಮತಿ ಪಡೆದಿದ್ದಾರೆ ಎಂದು ನವಾಬ್ ಮಲಿಕ್ ಆರೋಪಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು, ಥಾಣೆ ಅಬಕಾರಿ ಅಧಿಕಾರಿಗಳ ವಿವರಣೆ ಹಾಗೂ ವಾಂಖೆಡೆ ಪರ ವಕೀಲರ ವಾದವನ್ನು ಆಲಿಸಿದ ಬಳಿಕ ಸದ್ಗುರು ಹೊಟೇಲ್ & ಬಾರ್’ಗೆ ನೀಡಲಾಗಿರುವ ಅನುಮತಿಯನ್ನು ರದ್ದುಮಾಡಿರುವುದಾಗಿ ಘೋಷಿಸಿದ್ದಾರೆ.