ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣದಲ್ಲಿ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಝ್ ಅವರು ಇಬ್ಬರು ವ್ಯಕ್ತಿಗಳನ್ನು ‘ನಕಲಿ ಎನ್ಕೌಂಟರ್’ ಮೂಲಕ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
‘ಎನ್ಕೌಂಟರ್ ಸ್ಪೆಷಲಿಸ್ಟ್’ ಆಗಿರುವ ವಾಝ್ ಅವರು ಇಬ್ಬರು ವ್ಯಕ್ತಿಗಳನ್ನು ಹತ್ಯೆಗೈಯ್ಯುವ ಮೂಲಕ ಈ ಪ್ರಕರಣವನ್ನು ಬಗೆಹರಿಸಲು ಬಯಸಿದ್ದರಾದರೂ ಅದು ವಿಫಲವಾಗಿತ್ತು.
ಇಬ್ಬರು ವ್ಯಕ್ತಿಗಳನ್ನು ಹತ್ಯೆಗೈಯ್ಯುವ ಮೂಲಕ, ಸ್ಫೋಟಕ ಪತ್ತೆ ಪ್ರಕರಣವನ್ನು ಬಗೆಹರಿಸಿ ಪ್ರಶಂಸೆ ಗಳಿಸುವುದಕ್ಕೆ ವಾಝ್ ಸಂಚು ರೂಪಿಸಿದ್ದರಾದರೂ ಯೋಜನೆ ವಿಫಲಗೊಂಡಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಸ್ಫೋಟಕಗಳಿಂದ ತುಂಬಿದ ಎಸ್‌ಯುವಿ ಕಾರು ಫೆಬ್ರವರಿ 25 ರಂದು ಅಂಬಾನಿಯ ನಿವಾಸದ ಮುಂದೆ ನಿಲ್ಲಿಸಲಾಗಿತ್ತು. ಎಸ್‌ಯುವಿ ಕಾರಿನ ಮಾಲಕ, ಉದ್ಯಮಿ ಮನ್ಸುಖ್ ಹಿರೇನ್ ಮಾರ್ಚ್ 5 ರಂದು ಶವವಾಗಿ ಪತ್ತೆಯಾಗಿದ್ದರು. ಮಾರ್ಚ್ 13 ರಂದು ಎನ್‌ಐಎ ವಾಝ್ ನನ್ನು ಬಂಧಿಸಿದೆ.