Home ಟಾಪ್ ಸುದ್ದಿಗಳು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿ 11 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧ ಆಯ್ಕೆ

ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿ 11 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧ ಆಯ್ಕೆ

ಹೊಸದಿಲ್ಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿದಂತೆ ಗುಜರಾತ್‌ನ ಮೂವರು ಹಾಗೂ ಒಟ್ಟು 11 ಮಂದಿ ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುಜರಾತ್‌ನಿಂದ ಬಿಜೆಪಿ ಅಭ್ಯರ್ಥಿಗಳಾದ ಎಸ್ ಜೈಶಂಕರ್, ಬಾಬುಭಾಯ್ ದೇಸಾಯಿ ಮತ್ತು ಕೇಸರಿದೇವ್ ಸಿಂಗ್ ಝಾಲಾ ಆಯ್ಕೆಯಾಗಿದ್ದಾರೆ. ಇದರೊಂದಿಗೆ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಎರಡನೇ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದಂತಾಗಿದೆ.

ಗುಜರಾತ್‌ನ ಮೂರು ಸ್ಥಾನಗಳು, ಗೋವಾದ ಒಂದು ಸ್ಥಾನ ಮತ್ತು ಪಶ್ಚಿಮ ಬಂಗಾಳದ ಆರು ಸ್ಥಾನಗಳಿಗೆ ಜುಲೈ 24 ರಂದು ಚುನಾವಣೆ ನಡೆಯಬೇಕಿತ್ತು. ಕೇಂದ್ರ ಚುನಾವಣಾ ಆಯೋಗ ಹೊರಡಿಸಿದ ಅಧಿಸೂಚನೆಯ ಪ್ರಕಾರ, ರಾಜ್ಯಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಇಂದು (ಜುಲೈ 17) ಕೊನೆಯ ದಿನಾಂಕವಾಗಿದೆ. ನಾಮಪತ್ರ ಸಲ್ಲಿಸಿದ್ದ ಸ್ಥಾನಗಳಿಗೆ ಎದುರಾಳಿ ಅಭ್ಯರ್ಥಿಗಳೇ ಇಲ್ಲದ ಕಾರಣ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಫಲಿತಾಂಶವನ್ನು ಇಂದೇ ಘೋಷಿಸಲಾಗಿದೆ.

ಟಿಎಂಸಿಯ ಆರು ಮಂದಿ ಅಭ್ಯರ್ಥಿಗಳಾದ ಸುಖೇಂದು ಶೇಖರ್ ರಾಯ್, ಡೋಲಾ ಸೋನಾ, ಸಾಕೇತ್ ಗೋಖಲೆ, ಸಮೀರುಲ್ ಇಸ್ಲಾಂ, ಪ್ರಕಾಶ್ ಬಾರಿಕ್, ಡೆರೆಕ್ ಒ’ಬ್ರಯಾನ್​​ ಅವಿರೋಧ ಆಯ್ಕೆಯಾಗಿದ್ದಾರೆ.

ಪ್ರಸ್ತುತ, ಎನ್‌ಡಿಎ ಮೈತ್ರಿಕೂಟವು ರಾಜ್ಯಸಭೆಯಲ್ಲಿ ಒಟ್ಟು 105 ಸದಸ್ಯರನ್ನು ಹೊಂದಿದೆ. ಇಬ್ಬರು ಸ್ವತಂತ್ರ ಸದಸ್ಯರು ಮತ್ತು ಐದು ನಾಮನಿರ್ದೇಶಿತ ಸಂಸದರ ಬೆಂಬಲವನ್ನು ಕೋರುತ್ತಿದ್ದು, ನಂತರ ಬಿಜೆಪಿ ಸದಸ್ಯರ ಸಂಖ್ಯೆ 112ಕ್ಕೆ ಏರಿಕೆಯಾಗಲಿದೆ. ಆದರೆ, ಬಹುಮತ ಸಾಧಿಸಲು ಇನ್ನೂ ಎಂಟು ಸದಸ್ಯರ ಅಗತ್ಯವಿದೆ.

Join Whatsapp
Exit mobile version