Home ಟಾಪ್ ಸುದ್ದಿಗಳು ಹಣಕ್ಕಾಗಿ ಹುದ್ದೆಯಲ್ಲಿ 500 ಕೋಟಿ ರೂಪಾಯಿ ಡೀಲ್: ಹೆಚ್​ಡಿ ಕುಮಾರಸ್ವಾಮಿ ಆರೋಪ

ಹಣಕ್ಕಾಗಿ ಹುದ್ದೆಯಲ್ಲಿ 500 ಕೋಟಿ ರೂಪಾಯಿ ಡೀಲ್: ಹೆಚ್​ಡಿ ಕುಮಾರಸ್ವಾಮಿ ಆರೋಪ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಸತತ ಎರಡು ತಿಂಗಳಿಂದ ವರ್ಗಾವಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಅವಧಿಯಲ್ಲಿ ಹಣಕ್ಕಾಗಿ ಹುದ್ದೆ ವ್ಯವಹಾರದಲ್ಲಿ 500 ಕೋಟಿ ರೂಪಾಯಿಗೂ ಮೀರಿ ಡೀಲ್ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ವರ್ಗಾವರ್ಗಿ ದಂಧೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಬಗ್ಗೆ ನನಗೆ ಮಾಹಿತಿ ಇದೆ. ಆ ಬಗ್ಗೆ ಎಲ್ಲಾ ಕಡೆ ಚರ್ಚೆ ಆಗುತ್ತಿದೆ ಎಂದರು. ಕರ್ನಾಟಕ ಸಮೃದ್ಧವಾಗಿದೆ. ಜನ ಪ್ರಾಮಾಣಿಕವಾಗಿ ತೆರಿಗೆ ಕಟ್ಟಿ ಖಜಾನೆ ತುಂಬಿಸುತ್ತಿದ್ದಾರೆ. ಎಲ್ಲಾ ಮೇವು ಸಮೃದ್ಧವಾಗಿದೆ. ಇಲ್ಲಿ ಚೆನ್ನಾಗಿ, ಪೊಗದಸ್ತಾಗಿ ಮೇಯುತ್ತಿದ್ದಾರೆ. ಆ ಮೇವನ್ನು ಇಡೀ ದೇಶಕ್ಕೆಲ್ಲ ಹಂಚಲು ಹೊರಟಿದ್ದಾರೆ. ಇದೇನಾ ಕರ್ನಾಟಕದ ಮಾದರಿ ಎಂದರೆ? ಇದೇನಾ ಹೊಸ ಭರವಸೆ, ಹೊಸ ಕನಸು? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಈಗ ನಡೆಯುತ್ತಿರುವ ಯೋಜನೆಗಳ ಕಾಮಗಾರಿಗಳ ಒಟ್ಟು ಅಂದಾಜು ವೆಚ್ಚವನ್ನು ಶೇ 20-30ಕ್ಕೆ ಹೆಚ್ಚಳ ಮಾಡಿಕೊಳ್ಳಲಾಗುತ್ತಿದೆ. ಕಮಿಷನ್ ಹೊಡೆಯಲು ಏನು ಬೇಕೋ ಅದನ್ನು ಮಾಡಿಕೊಳ್ಳುತ್ತಿದ್ದಾರೆ. ಸಚಿವರೊಬ್ಬರು ಒಂದು ಪತ್ರಿಕೆಯ ಕಟಿಂಗ್ ಇಟ್ಟುಕೊಂಡು ಎಲ್ಲೆಲ್ಲಿ ರೇಟ್ ಫಿಕ್ಸ್ ಆಗಿದೆ ಅಂತ ಹೇಳಿದರು. ನಾನು ಆ ಕಟಿಂಗ್​ನಲ್ಲಿರುವ ಸುದ್ದಿ ಯಾವುದು ಎಂದು ಪತ್ತೆ ಹಚ್ಚಿದೆ. ಅದು 2013ರಿಂದ 2018ರವರೆಗೆ ನಡೆದಿರುವ ವರ್ಗಾವಣೆ ದಂಧೆಗೆ ಸಂಬಂಧಿಸಿದ ಸುದ್ದಿ. “ಮುಖ್ಯ ಎಂಜಿನಿಯರ್ ಹುದ್ದೆಗೆ 30 ಕೋಟಿ ಕಪ್ಪಾ” ಎನ್ನುವ ಸುದ್ದಿಯ ಕಟಿಂಗ್ ಅದು. ಅದು ರೇವಣ್ಣ ಅವರದ್ದಾಗಲಿ, ನನ್ನ ಕಾಲದ್ದಾಗಲಿ ಆಗಿರಲಿಲ್ಲ ಎಂದು ಟಾಂಗ್ ನೀಡಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹುಲುಸಾಗಿ ಮೇಯಲು ಮೇವು ಇದೆ. ಅದನ್ನು ಮೇಯಲು ಯಾರು ಯಾರನ್ನು ಬಿಟ್ಟಿದ್ದಾರೆ ಎಂಬುದು ಇವತ್ತಿನ ಪತ್ರಿಕೆಗಳಲ್ಲಿ ಬಂದಿದೆ. ಪರಿಸರ ಇಲಾಖೆಯಲ್ಲಿ ದಂಧೆ ಶುರುವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಯಾರೋ ಸೂರಿ ಪಾಯಲ್ ಅಂತೆ. ನಾನು ಇದೇ ಮೊದಲಿಗೆ ಈ ಹೆಸರು ಕೇಳಿದ್ದು. ನಾನು ಅದೆಂಥದೋ ಅವನ್ಯಾರೋ ಫಾರಿನರ್ ತರ ಇದ್ದಾನೆ ಅಂದುಕೊಂಡಿದ್ದೆ. ಅದೂ ಲೋಕಲ್ ಅನ್ನುವುದು ಆಮೇಲೆ ಗೊತ್ತಾಯಿತು. ಮಾತೆತ್ತಿದರೆ ಸರ್ವಜನಾಂಗದ ಶಾಂತಿಯ ತೋಟ ಅಂದರು. ಆದರೆ, ಅದು ಇವರು ಮೇಯುವ ಸಮೃದ್ಧಿಯ ತೋಟವಾಗಿದೆ. ಎಲ್ಲಿ ನೋಡಿದರೂ ಸ್ವಜನ ಪಕ್ಷಪಾತ, ವರ್ಗಾವಣೆ ದಂಧೆ ಜೋರಾಗಿ ನಡೆಯುತ್ತಿದೆ ಎಂದು ನೇರ ಆರೋಪ ಮಾಡಿದರು.

ನನ್ನ ವಿಚಾರದಲ್ಲಿ ಒಂದೇ ಒಂದು ವರ್ಗಾವಣೆ ಪ್ರಕರಣ ತೋರಿಸಿ ಸಾಭೀತು ಮಾಡಿದರೆ ನಾನು ಸಕ್ರಿಯ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ. ಅಂಥ ಮಾತು ಹೇಳುವ ಧೈರ್ಯ ಅವರಿಗೆ ಇದೆಯಾ? ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹೇಗೆಲ್ಲಾ ಮೆಯುತ್ತಿದ್ದಾರೆ ಎಂಬುದು ಎಲ್ಲರಿಗೂ ಚೆನ್ನಾಗಿ ಅರ್ಥವಾಗುತ್ತಿದೆ. ಅಧಿಕಾರಿಯೊಬ್ಬರು ನನ್ನನ್ನು ಭೇಟಿಯಾಗಿದ್ದಾಗ ವರ್ಗಾವಣೆ ದಂಧೆಯ ಬಗ್ಗೆ ಹೇಳಿದರು. ಈವರೆಗೂ ಕಡಿಮೆ ಎಂದರೂ 500 ಕೋಟಿ ರೂಪಾಯಿಗೂ ಮಿಕ್ಕಿ ವ್ಯವಹಾರ ನಡೆದಿದೆ ಎಂದು ಅವರು ಹೇಳಿದರು. ಸರಕಾರದಿಂದ ವರ್ಗಾವಣೆ ಕಿರುಕುಳಕ್ಕೆ ಒಳಗಾಗಿರುವ ಅಧಿಕಾರಿಗಳು ಸುಳ್ಳು ಹೇಳುತ್ತಾರೆಯೇ? ಇದೆಕ್ಕೆಲ್ಲ ಸಾಕ್ಷಿ ಸಂಗ್ರಹ ಮಾಡಲು ಸಾಧ್ಯವೇ? ಈ ರೀತಿ ಆದರೆ ರಾಜ್ಯ ಉಳಿಯುತ್ತಾ? ಎಂದು ಪ್ರಶ್ನಿಸಿದರು.

Join Whatsapp
Exit mobile version