Home ಜಾಲತಾಣದಿಂದ ರಿಯಾನ್ ಇಂಟರ್ ನ್ಯಾಷನಲ್ ಪ್ರಾಂಶುಪಾಲೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಕಿರುಕುಳ: ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಹೈಕೋರ್ಟ್...

ರಿಯಾನ್ ಇಂಟರ್ ನ್ಯಾಷನಲ್ ಪ್ರಾಂಶುಪಾಲೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಕಿರುಕುಳ: ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಹೈಕೋರ್ಟ್ ಆದೇಶ

ಬೆಂಗಳೂರು; ಬನ್ನೇರುಘಟ್ಟ ರಸ್ತೆಯ ರಿಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಮತ್ತು ಪರೀಕ್ಷೆ ಬರೆಯಲು ಅವಕಾಶ ನೀಡದ ಧೋರಣೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಪೋಷಕರ ಪರವಾಗಿ ಮಧ್ಯಂತರ ತೀರ್ಪು ನೀಡಿರುವ ರಾಜ್ಯ ಹೈಕೋರ್ಟ್, ಇದೇ 20ರಿಂದ ಪ್ರಾರಂಭವಾಗಲಿರುವ 9ನೇ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವಂತೆ ಆದೇಶಿಸಿದೆ.

ಅಲ್ಲದೇ  ಮುಂದಿನ ವಿಚಾರಣೆಗೆ ಹಾಜರಾಗುವಂತೆ ಶಾಲಾ ಆಡಳಿತ ಮಂಡಳಿ ಮತ್ತು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದೆ.

ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿ ಸೋಮವಾರದಿಂದ ಆರಂಭವಾಗಲಿರುವ 9 ನೇ ತರಗತಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿ, ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿದೆ. 

ಹರಿವಂಶ್ ಅವರ ಎರಡನೇ ಪುತ್ರ 9ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಡಿಸೆಂಬರ್ ಎರಡನೇ ವಾರದಲ್ಲಿ ನಡೆದ ಪರೀಕ್ಷೆಗೂ ಸಹ ಹಾಜರಾಗಲು ಪ್ರಾಂಶುಪಾಲಸರು ಅವಕಾಶ ನೀಡಿರಲಿಲ್ಲ.

ಪೋಷಕರಾದ ಹರಿಶಂಕರ್ ಅವರು 9 ಮತ್ತು 10 ನೇ ತರಗತಿ ಓದುತ್ತಿರುವ ತಮ್ಮ ಇಬ್ಬರು ಮಕ್ಕಳಿಗೆ ಒಂದೂವರೆ ವರ್ಷದಿಂದ ಶಾಲೆಯಲ್ಲಿ ಕಿರುಕುಳ ನೀಡಲಾಗುತ್ತಿದೆ. ವಿಶೇಷವಾಗಿ ಪ್ರಾಂಶುಪಾಲರಾದ ಪ್ರೀತಿ ಸೆತ್ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು, ಈ ಬಗ್ಗೆ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

ನಂತರ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೂ ದೂರು ಸಲ್ಲಿಸಿದ್ದರು.  ನಂತರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಗಮನಕ್ಕೂ ಈ ವಿಚಾರವನ್ನು ತಂದಿದ್ದರು. ರಾಷ್ಟ್ರೀಯ ಆಯೋಗ ಪ್ರಾಂಶುಪಾಲರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿತ್ತು. 

ಶಾಲೆಯಲ್ಲಿ ಪದೇ ಪದೇ ಪೋಷಕರ ಸಭೆ ಕರೆದು ಅನಗತ್ಯವಾಗಿ ಪೋಷಕರನ್ನು ಪ್ರಶ್ನಿಸುತ್ತಿದ್ದರು. ಇದನ್ನು ಪೋಷಕರು ಆಕ್ಷೇಪಿಸಿದ ಕಾರಣಕ್ಕಾಗಿ ತನ್ನ ಇಬ್ಬರು ಮಕ್ಕಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ. ಮಕ್ಕಳು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದರು.

ಕಳೆದ 9 – 10 ವರ್ಷಗಳಿಂದ ಮಕ್ಕಳು ಇದೇ ಶಾಲೆಯಲ್ಲಿ ಓದುತ್ತಿದ್ದಾರೆ. ಆದರೆ ಒಂದೂವರೆ ವರ್ಷದ ಹಿಂದೆ ಪ್ರೀತಿ ಸೆತ್ ಪ್ರಾಂಶುಪಾಲರಾದ ನಂತರ ಇಂತಹ ಸಮಸ್ಯೆ ನಿರ್ಮಾಣವಾಗಿದೆ ಎಂದು ಹರಿಶಂಕರ್ ಆರೋಪಿಸಿದ್ದರು. ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡದ ಕಾರಣಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.

Join Whatsapp
Exit mobile version