ತಿರುವನಂತರಪುರಂ: ಆರೆಸ್ಸೆಸ್’ನೊಂದಿಗೆ ಗೌಪ್ಯ ಮಾತುಕತೆ ನಡೆಸಿದ ಜಮಾಅತೆ ಇಸ್ಲಾಮಿ ಸಂಘಟನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಗೌಪ್ಯ ಸಭೆಯಲ್ಲಿ ಏನು ಚರ್ಚಿಸಲಾಯಿತು ಎಂಬುದನ್ನು ಸಭೆಯಲ್ಲಿ ಭಾಗವಹಿಸಿದ್ದ ಜಮಾಅತ್ ಮುಖಂಡರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ತಿಂಗಳು ನವದೆಹಲಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ದೊಂದಿಗೆ ಜಮಾಅತೆ ಇಸ್ಲಾಮಿ ನಡೆಸಿದ ಮಾತುಕತೆ ಸಮಾಜದ ವಿವಿಧ ವಿಭಾಗಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಸಂಘ ಪರಿವಾರದೊಂದಿಗಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಮಾತುಕತೆಯ ಅವಶ್ಯಕತೆಯಿದೆ ಎಂಬ ಜಮಾಅತೆ ಇಸ್ಲಾಮಿನ ವಾದವು ಅದರ ಬೂಟಾಟಿಕೆಯನ್ನು ಬಹಿರಂಗಪಡಿಸುತ್ತದೆ ಎಂದು ಪಿಣರಾಯಿ ವಿಜಯನ್ ಫೇಸ್’ಬುಕ್ ಪೋಸ್ಟ್’ನಲ್ಲಿ ಹೇಳಿದ್ದಾರೆ.
ಎಲ್ಲಾ ಅಲ್ಪಸಂಖ್ಯಾತರ ಪರವಾಗಿ ಮಾತನಾಡುವ ಹಕ್ಕನ್ನು ಜಮಾಅತ್-ಎ-ಇಸ್ಲಾಮಿಗೆ ಯಾರು ನೀಡಿದವರು? ಚರ್ಚೆಯ ವಿಷಯ ಏನೇ ಇರಲಿ, ಅದು ಅಲ್ಪಸಂಖ್ಯಾತರಿಗೆ ಸಹಾಯ ಮಾಡಲು ಅಲ್ಲ” ಎಂದು ಪಿಣರಾಯ್ ಹೇಳಿದರು.
“… ಅಂತಹ ಜನರೊಂದಿಗೆ ಮಾತುಕತೆ ನಡೆಸಿದರೆ ಜಾತ್ಯತೀತತೆ ಮತ್ತು ಅಲ್ಪಸಂಖ್ಯಾತರ ರಕ್ಷಣೆ ಹೇಗೆ ಸಾಧ್ಯ? ಎಂದು ಪಿಣರಾಯಿ ವಿಜಯನ್ ಪ್ರಶ್ನಿಸಿದರು.
ಸಂಘ ಪರಿವಾರದ ತೀವ್ರಗಾಮಿ ಹಿಂದುತ್ವ ರಾಜಕಾರಣದ ವಿರುದ್ಧ ಭಾರತದ ಜಾತ್ಯತೀತ ಶಕ್ತಿಗಳು ಕಠಿಣವಾಗಿ ಹೋರಾಡುತ್ತಿರುವ ಸಮಯದಲ್ಲಿ ಈ ಸಭೆ ನಡೆದಿದೆ ಎಂದು ಸಿಎಂ ಹೇಳಿದರು.