ಮರಿಯಾಪೋಲ್: ಉಕ್ರೇನ್ ದೇಶದ ಮೇಲಿನ ತನ್ನ ದಾಳಿಯನ್ನು ರಷ್ಯಾ ಮತ್ತಷ್ಟು ತೀವ್ರ ಗೊಳಿಸಿದ್ದು, ಉಕ್ರೇನ್’ನ ಬಂದರು ನಗರಿ ಮರಿಯಾಪೋಲ್’ನ ರಂಗಭೂಮಿ ಕೇಂದ್ರದ ಮೇಲೆ ನಡೆಸಿದ ಬಾಂಬ್ ದಾಳಿಗೆ ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಮರಿಯಾಪೋಲ್ ನಗರದ ಮೂರು ಅಂತಸ್ತಿನ ರಂಗಭೂಮಿ ಕೇಂದ್ರದಲ್ಲಿ ರಷ್ಯಾ ದಾಳಿಯಿಂದ ನಿರಾಶ್ರಿತರಾಗಿದ್ದ ಮಕ್ಕಳು , ಮಹಿಳೆಯರು ಸೇರಿದಂತೆ 1200ಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದರು.
ಬಾಂಬ್ ದಾಳಿಯಿಂದಾಗಿ ಕಟ್ಟಡವು ಸಂಪೂರ್ಣವಾಗಿ ನಾಶವಾಗಿದ್ದು, ಇದುವರೆಗೆ ಕೇವಲ 130ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಒಳಗೆ ಸಿಲುಕಿರುವ ನೂರಾರು ಜನ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಂಬ್ ದಾಳಿಗೆ ಶಾಲೆ ನೆಲಸಮ – 21 ಮಂದಿ ಸಾವು
ಖಾರ್ಕಿವ್ ನಗರದ ಸಮೀಪದ ಮೆರೆಫಾದಲ್ಲಿ ಶಾಲೆ ಮತ್ತು ಸಮುದಾಯ ಕೇಂದ್ರವನ್ನು ಗುರಿಯಾಗಿಟ್ಟುಕೊಂಡು ರಷ್ಯಾ ನಡೆಸಿದ ದಾಳಿಯಿಂದ 21 ಮಂದಿ ಸಾವನ್ನಪ್ಪಿದ್ದಾರೆ ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗುರುವಾರ ಬೆಳಗಿನ ಜಾವದ ಮೊದಲು ದಾಳಿ ನಡೆದಿದೆ ಎಂದು ಮೆರೆಫಾ ಮೇಯರ್ ವೆನಿಯಾಮಿನ್ ಸಿಟೋವ್ ಹೇಳಿದ್ದಾರೆ